ಮಂಗಳೂರು: ವಿದ್ಯಾರ್ಥಿಗಳು ತಮ್ಮ ಗುರಿಗಳಲ್ಲಿ ಬದ್ಧತೆ ಮತ್ತು ಸ್ಪಷ್ಟತೆಯನ್ನು ಹೊಂದಿರಬೇಕು.
ಪರಿಶ್ರಮದೊಂದಿಗೆ ಕೆಲಸ ಮಾಡಿದರೆ ಫಲಿತಾಂಶ
ತಾನಾಗಿ ಲಭಿಸುತ್ತದೆ. ಯಾವುದೇ ಕ್ಷೇತ್ರವನ್ನು ನಾವು ಆಯ್ಕೆ ಮಾಡಿದರು ಪರಿಶ್ರಮವಿಲ್ಲದೆ ಯಶಸ್ಸು, ನೆಮ್ಮದಿಯ ಬದುಕನ್ನು ಪಡೆಯಲು ಖಂಡಿತ ಸಾಧ್ಯವಿಲ್ಲ ಎಂದು ಎಕ್ಸ್ಪರ್ಟ್ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಡಾ.ಸ್ಕಂದ ಮೂರ್ತಿ, ನ್ಯೂರೋಸರ್ಜನ್ ಅವರು ತಿಳಿಸಿದರು.
ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಾರ್ಷಿಕ ದಿನಾಚರಣೆ “ಎಕ್ಸ್ಪರ್ಟ್ ಡೆ” ಕಾರ್ಯಕ್ರಮದ
ಉದ್ಘಾಟನಾ ಸಮಾರಂಭ ದಿನಾಂಕ 19 ಡಿಸೆಂಬರ್ 2024ರ ಬೆಳಗ್ಗೆ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜರಗಿತು. “ಎಕ್ಸ್ಪರ್ಟ್ ಡೆ”ಯ ಸಾಂಸ್ಕೃತಿಕ ಹಾಗೂ ಸ್ವರ್ಧಾ ಕಾರ್ಯಕ್ರಮವನ್ನು ಡಾ. ಸ್ಕಂದ ಮೂರ್ತಿ ಅವರು ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್ ನಾಯಕ್ ಹಾಗೂ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ. ಎನ್.ನಾಯಕ್ ವಿದ್ಯಾರ್ಥಿಗಳಿಗೆ ಕಾಲೇಜಿನ ವಾರ್ಷಿಕೋತ್ಸವದ ಕುರಿತಾಗಿ ಶುಭಹಾರೈಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಮಚಂದ್ರಭಟ್ ರವರು ಸ್ವಾಗತಿಸಿದರು. ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿಯಾದ ತೃಷಾ ಎಸ್
ಕಾರ್ಯಕ್ರಮವನ್ನು ನಿರೂಪಿಸಿದರು.ಕಾರ್ಯಕ್ರಮದಲ್ಲಿ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಶ್ರೀ ಅಂಕುಶ್ ಎನ್. ನಾಯಕ್, ವಾಸ್ತುಶಿಲ್ಪ ತಜ್ಞೆ ದೀಪಿಕಾ ಎ ನಾಯಕ್, ಹಳೆ ವಿದ್ಯಾರ್ಥಿಯಾದ ಡಾ.ಅನುಷಾ ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕ ಭರತ್ ಚಂದ್ರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
“ಎಕ್ಸ್ಪರ್ಟ್ ಡೆ” ಉದ್ಘಾಟನಾ ಸಮಾರಂಭದ ಬಳಿಕ ವಿದ್ಯಾರ್ಥಿಗಳಿಗೆ ಸುಮಾರು 15ಕ್ಕೂ ಹೆಚ್ಚು ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂತಸಗೊಂಡರು.ಶೈಕ್ಷಣಿಕ ಸಾಲಿನ ಬಹುಮಾನ ವಿತರಣಾ ಸಮಾರಂಭವು ಲೆಕ್ಕಪರಿಶೋಧಕರಾದ ಸಿಎ. ಎಂ.ಜಗನ್ನಾಥ್ ಕಾಮತ್ ಅವರಿಂದ ನೆರವೇರಿತು. ಶೈಕ್ಷಣಿಕ ಸಾಲಿನ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಬಹುಮಾನವನ್ನು ಈ ಸಂದರ್ಭದಲ್ಲಿ ನೀಡಲಾಯಿತು.
ವಿದ್ಯಾರ್ಥಿಗಳು ತಮ್ಮ ಜೀವನದ ಈ ಪಯಣದಲ್ಲಿ ಏನು? ಮತ್ತು ಯಾಕೆ? ಇದರ ಸರಿಯಾದ ಅರಿವನ್ನು ಹೊಂದಿ ಮುಂದೆ ಸಾಗಬೇಕು. ಈ ಹಂತದಲ್ಲಿ ಹಲವಾರು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ, ಆದರೆ ಯಾವುದಕ್ಕೂ ಎದೆಗುಂದದೆ, ಆತಂಕಕ್ಕೆ ಒಳಪಡದೆ ನಮ್ಮ ಕರ್ತವ್ಯವನ್ನು ಸಮರ್ಪಣಾ ಮನೋಭಾವದಿಂದ ಮಾಡಬೇಕು. ಆಸಕ್ತಿಯಿಂದ ಓದುತ್ತಾ, ಸರಿಯಾಗಿ ಅರ್ಥೈಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿ ನಿತ್ಯ ದಿನಪತ್ರಿಕೆಯನ್ನು ಓದುವ ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಾ, ನಮ್ಮ ಸಾಮಾನ್ಯ ಜ್ಞಾನವನ್ನು ಕೂಡ ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಮಾತ್ರ ತಮ್ಮನ್ನು ತೊಡಗಿಸಿಕೊಳ್ಳದೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡು ಜ್ಞಾನ ಮತ್ತು ಪ್ರತಿಭೆಯ ವಿಕಸನವನ್ನು ಕಾಣಬೇಕು ಎಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಹಿಲನ್ ಎಂ.ಪಿ, ಐಎಎಸ್ ಅವರು ಅಭಿಪ್ರಾಯ ಪಟ್ಟರು.
ಅವರು ಕೊಡಿಯಾಲ್ಬೈಲ್ ಎಕ್ಸ್ಪಟ್ ಪದವಿ ಪೂರ್ವ
ಕಾಲೇಜಿನ 39ನೇ ಎಕ್ಸ್ಪರ್ಟ್ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ನಿಖರ ಗುರಿಯನ್ನು ಹೊಂದಿ, ಆ ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮ ಪಡಬೇಕು.
ಸಷ್ಟ ಗುರಿಯೊಂದಿಗೆ ಸಾಗಿದಾಗ ನಮ್ಮ ಬದುಕಿಗೊಂದು ಅರ್ಥ ಬರುತ್ತದೆ. ಸರಿಯಾದ ನಿರ್ಧಾರದೊಂದಿಗೆ ಸಾಗಿದರೆ ಅಸಾಧ್ಯವೆಂಬುದು ಇಲ್ಲ. ಗುರಿ ಸಾಧಿಸುವ ತನಕ ಛಲ ಬಿಡಬಾರದು , ಇವುಗಳೊಂದಿಗೆ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಗಮನ ಕೊಡಬೇಕು.
ಉತ್ತಮ ಆರೋಗ್ಯದ ಸಲುವಾಗಿ ಕನಿಷ್ಟ ಅರ್ಧ ಘಂಟೆಯ ವ್ಯಾಯಾಮ ಮಾಡುವ ಅಭ್ಯಾಸ ತುಂಬಾ ಮುಖ್ಯ ಎಂದು ಕಾರ್ಯಕ್ರಮಕ್ಕೆ ಗೌರವ ಅತಿಥಿಗಳಾಗಿ ಆಗಮಿಸಿದ ಹೃದ್ರೋಗ ತಜ್ಞನಾದ ಡಾ.ಪದ್ಮನಾಭ ಕಾಮತ್ ಅವರು ನುಡಿದರು.
ನಾವು ಇಂದು ಪಡುವ ಪರಿಶ್ರಮ ಮುಂದಿನ ದಿನಗಳಲ್ಲಿ ಖಂಡಿತ ಫಲವನ್ನು ಕೊಟ್ಟೇಕೊಡುತ್ತದೆ. ಆತ್ಮವಿಶ್ವಾಸದೊಂದಿಗೆ, ಸಾಧಿಸಬೇಕೆಂಬ ಛಲ ಬಿಡದೆ ಮುನ್ನುಗ್ಗಲು ಕಲಿಯಬೇಕು. ಶ್ರಮ ಪಟ್ಟರೆ ಜಯ ಖಂಡಿತ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್ ನಾಯಕ್ರವರು ಹೇಳಿದರು.
ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯು ಹಲವಾರು ಪ್ರಾಮಾಣಿಕ ಜನರ ನಿರಂತರ ಪರಿಶ್ರಮದ ಪ್ರತಿಫಲವಾಗಿದೆ. ಯಾವುದೇ ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿ ಕೊಳ್ಳದೆ ನಾವು ಪ್ರಾಮಾಣಿಕವಾಗಿ ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾ ಸಾಗಬೇಕು. ಎಂದು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ. ಎನ್.ನಾಯಕ್ ರವರು ಹೇಳಿದರು.
ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಶ್ರೀ ಅಂಕುಶ್ ಎನ್. ನಾಯಕ್ ಸ್ವಾಗತಿಸಿದರು.
ಇದೇ ವೇಳೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಮಚಂದ್ರಭಟ್ ರವರು ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಈ ಸುಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿರುವ ಹಳೆ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
2024-25ರ ಸಾಲಿನ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಯಾದ ರುಹಾನ್ ದರ್ಶಕ್ ತ್ರಿವೇದಿ “ ಬೆಸ್ಟ್ ಇನ್ ನಾನ್ ಸ್ಕೊಲಾಸ್ಟಿಕ್ ಪ್ರಶಸ್ತಿಯನ್ನು , ಕೆ ರೆಹಾನ್ ಮೊಹಮ್ಮದ್ “ಬೆಸ್ಟ್ ಇನ್ ಸೊಲಾಸ್ಟಿಕ್” ಎಂಬ ಪ್ರಶಸ್ತಿಯನ್ನು, ಶ್ರೇಯಾ ಎಸ್ “ಎಕ್ಸ್ಪರ್ಟ್ ಸೂಪರ್ ಸ್ಟಾರ್” ಪ್ರಶಸ್ತಿಯನ್ನು ಪಡೆದಿದ್ದು ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಶ್ರೀ ಅಂಕುಶ್ ಎನ್. ನಾಯಕ್, ವಾಸ್ತುಶಿಲ್ಪ ತಜ್ಞೆ ದೀಪಿಕಾ ಎ ನಾಯಕ್, ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಎಕ್ಸ್ಪರ್ಟ್ ಕಾಲೇಜು ವಳಚ್ಚಿಲ್ನ ಪ್ರಾಂಶುಪಾಲರಾದ ಎನ್.ಕೆ.ವಿಜಯನ್ ಕರಿಪಲ್, ಇನ್ನಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ನವನೀತ್
ಪೈ ಹಾಗೂ ದೀಕ್ಷಾ ಶೆಣೈ ಸಭಾ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರಿಯಿತು. ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಂದ ಹಲವಾರು ಮನೋರಂಜನೆಯ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು.
ಇದು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗನ್ನು ನೀಡಿತು. ವಿದ್ಯಾರ್ಥಿಗಳಾದ ಜೊವಿಲಾ ವೇಗಸ್, ಡಾನಿಯಲ್ ಜೋಸೆಫ್ ಎಂ, ನಿರೀಕ್ಷಾ ಎಮ್ ಕುಮಾರ್, ಸೌಧೃತಿ ದಿನೇಶ್ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯಕ್ರಮ ಸಂಯೋಜಕ ಉಪನ್ಯಾಸಕ ಭರತ್ ಚಂದ್ರ ಅವರಿಂದ ಧನ್ಯವಾದ ಕಾರ್ಯಕ್ರಮ ನೆರವೇರಿತು.