ಉಳ್ಳಾಲ: ಖಾಸಗಿ ರೆಸಾರ್ಟ್ ವೊಂದರ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ಯುವತಿಯರು ಮೃತಪಟ್ಟ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮೇಶ್ವರದಲ್ಲಿ ಇಂದು ಬೆಳಗ್ಗೆ ನಡೆದಿರುವುದು ವರದಿಯಾಗಿದೆ.
ಮೃತರನ್ನು ಕೀರ್ತನಾ ಎನ್ (21), ನಿಶಿತಾ ಎಂ.ಡಿ. (21) ಹಾಗೂ ಪಾರ್ವತಿ ಎಸ್. (20) ಎಂದು ಗುರುತಿಸಲಾಗಿದೆ. ಈ ಮೂವರು ಮೈಸೂರು ನಿವಾಸಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಸೋಮೇಶ್ವರ ಗ್ರಾಮದ ಬಟ್ಟಪ್ಪಾಡಿ ಅಡ್ಡರಸ್ತೆ ಪೆರಿಬೈಲ್ ಎಂಬಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಈ ದುರಂತ ಸಂಭವಿಸಿದೆ.
ಮೈಸೂರಿನ ಈ ಮೂವರು ಯುವತಿಯರು ಶನಿವಾರ ರೆಸಾರ್ಟ್ ಗೆ ಆಗಮಿಸಿದ್ದರು. ಇಂದು ಬೆಳಗ್ಗೆ ರೆಸಾರ್ಟ್ ಮುಂಭಾಗದಲ್ಲಿರುವ ಸ್ವಿಮ್ಮಿಂಗ್ ಪೂಲ್ ನಲ್ಲಿ ಆಟವಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
VAZCO ಬೀಚ್ ರೆಸಾಟ್೯ಗೆ ಬೀಗಮುದ್ರೆ:
ಸರಿಯಾಗಿ ಈಜು ಬಾರದ ಯುವತಿಯರು ಆಳವಿರುವ ಕಡೆ ತೆರಳಿದ್ದರಿಂದ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ರೆಸಾರ್ಟ್ ಸಿಬ್ಬಂದಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸೋಮೇಶ್ವರದ VAZCO ಬೀಚ್ ರೆಸಾಟ್೯ಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ. ಈ ರೆಸಾಟ್೯ನ ಟ್ರೇಡ್ ಲೈಸನ್ಸ್ ಮತ್ತು ಟೂರಿಸಂ ಪರವಾನಿಗೆಯನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಮಂಗಳೂರು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಘಟನಾ ಸ್ಥಳದಲ್ಲಿ ಪೊಲೀಸರು ತನಿಖೆ ನಡೆಸುತ್ತಿದೆ.












