ಉದ್ಘಾಟನೆ ಭಾಗ್ಯವಿಲ್ಲದೆ ಅನಾಥ ಸ್ಥಿತಿಯಲ್ಲಿದೆ ಬೀಡಿನಗುಡ್ಡೆಯ ಅನಿಲ ಚಿತಾಗಾರ.!

ಉಡುಪಿ: ನಗರದ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿ ಬಳಿ ಉಡುಪಿ ನಗರಸಭೆ ಒಂದು ಕೋಟಿಗೂ ಅಧಿಕ ವೆಚ್ಚದಲ್ಲಿ ಪರಿಸರ ಸ್ನೇಹಿಯಾಗಿರುವ ಅನಿಲ ಚಿತಾಗಾರವನ್ನು ನಿರ್ಮಿಸಿದೆ. ಸಿದ್ಧಗೊಂಡು ಹಲವು ಸಮಯ ಕಳೆದರೂ ಅನಿಲ ಚಿತಾಗಾರವು ಇನ್ನೂ ಉದ್ಘಾಟನೆ ಭಾಗ್ಯ ಪಡೆಯದೆ ಅನಾಥ ಸ್ಥಿತಿಯಲ್ಲಿದ್ದು, ತಕ್ಷಣ ಲೋಕಾರ್ಪಣೆಗೊಳಿಸುವಂತೆ ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿಬಂದಿದೆ.

ತಂತ್ರಜ್ಞಾನ ಮುಂದುವರಿದರೂ ಇನ್ನೂ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ಕಟ್ಟಿಗೆಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಪದ್ಧತಿಯಂತೆ ಅಂತ್ಯಸಂಸ್ಕಾರಗಳು ನಡೆಯುತ್ತಿವೆ. ಈ ಪದ್ಧತಿಯಿಂದ ಮರಗಳ ವಿನಾಶ ಹಾಗೂ ಶವ ದಹನದಿಂದಾಗುವ ಹೊಗೆ, ಹಾರುವ ಬೂದಿಯಿಂದ ಪರಿಸರ ವಾಯುಮಾಲಿನ್ಯ ಉಂಟಾಗುತ್ತದೆ. ಪರಿಸರ ರಕ್ಷಿಸುವ ದೃಷ್ಟಿಕೋನದಿಂದ ನಗರಸಭೆ ಶವಸಂಸ್ಕಾರಕ್ಕೆ ಆಧುನಿಕ ತಂತ್ರಜ್ಞಾನದ ಅನಿಲ ಚಿತಾಗಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿರುವ ಸಾಂಪ್ರದಾಯಿಕ ಚಿತಾಗಾರದ ಸನಿಹ ಸ್ಥಾಪಿಸಿತು. ಈ ಪರಿಸರಸ್ನೇಹಿ ಯೋಜನೆಗೆ ಸಾರ್ವಜನಿಕ ವಲಯದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು.

ಕಟ್ಟಿಗೆಯಿಂದ ಶವ ದಹಿಸಲು ಸುಮಾರು 2 ರಿಂದ 3 ಗಂಟೆಗಳು ಬೇಕಾಗಬಹುದು. ಅನಿಲ ಚಿತಾಗಾರದಲ್ಲಿ ಬಹಳ ಕಡಿಮೆ ಸಮಯದಲ್ಲಿ ಕಳೇಬರವನ್ನು ಭಸ್ಮಗೊಳಿಸಬಹುದು. ಅನಿಲ ಚಿತಾಗಾರದಲ್ಲಿ ಶವವನ್ನು ದಹಿಸುವಾಗ ಉತ್ಪತ್ತಿಯಾಗುವ ಹೊಗೆ ನೇರವಾಗಿ ಪರಿಸರದಲ್ಲಿ ಪಸರಿಸುವುದಿಲ್ಲ. ಈ ಚಿತಾಗಾರವು ಹೊಗೆಯಲ್ಲಿನ ರಾಸಾಯನಿಕವನ್ನು ನಿಯಂತ್ರಿಸಿ ಕೊಂಡು, ಶುದ್ದೀಕರಿಸಿದ ಹೊಗೆಯನ್ನು ಚಿಮಣಿಯ ಮೂಲಕ ಹೊರಹಾಕಿಸುವ ನವೀನ ವ್ಯವಸ್ಥೆ ಹೊಂದಿರುತ್ತದೆ. ಪರಿಸರಸ್ನೇಹಿಯಾಗಿ ಅನಿಲ ಚಿತಾಗಾರವು ಕೆಲಸ ನಿರ್ವಹಿಸುತ್ತದೆ.

ಪೂರ್ಣಪ್ರಮಾಣದಲ್ಲಿ ಸಿದ್ಧಗೊಂಡಿರುವ ಅನಿಲ ಚಿತಾಗಾರವನ್ನು ನಗರಾಡಳಿತ, ಜಿಲ್ಲಾಡಳಿತ, ಜನಪ್ರತಿನಿಧಿಗಳು, ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಆಗ್ರಹಪಡಿಸಿದ್ದಾರೆ.