ಉಡುಪಿ: ಮಲ್ಪೆ ತೊಟ್ಟಂ ಎಂಬಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಬಾಯಿಗೆ ಸೀಮೆಎಣ್ಣೆ ಹಾಕಿ ಬೆಂಕಿ ಉಗುಳುತ್ತಿದ್ದ ವ್ಯಕ್ತಿಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಮಲ್ಪೆಯ ಸತೀಶ(39) ಎಂದು ಗುರುತಿಸಲಾಗಿದೆ.
ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಇವರು, ಸೆ.9ರಂದು ರಾತ್ರಿ ತೊಟ್ಟಂನ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಬಾಯಿಗೆ ಸೀಮೆಎಣ್ಣೆ ಹಾಕಿಕೊಂಡು ಬೆಂಕಿ ಉಗುಳುತ್ತಿದ್ದರು.
ಈ ವೇಳೆ ಅವರು ಆಕಸ್ಮಿಕವಾಗಿ ಸೀಮೆಎಣ್ಣೆ ಕುಡಿದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡರೆನ್ನಲಾಗಿದೆ. ಸೆ.10ರಂದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಸೆ.12ರಂದು ನಸುಕಿನ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.