ಉಡುಪಿ: ಸಹಪಾಠಿ ಶ್ರೀಪಾದರೊಂದಿಗೆ ಜನ್ಮದಿನವನ್ನು ಆಚರಿಸಿದ ಪುತ್ತಿಗೆ ಶ್ರೀ

ಉಡುಪಿ: ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ 63ನೇ ಜನ್ಮನಕ್ಷತ್ರದ ಶುಭಸಂದರ್ಭದಲ್ಲಿ ತಮ್ಮ ಸಹಪಾಠಿಗಳಾದ ಅದಮಾರು ಹಿರಿಯ ಮಠಾಧೀಶರಾದ ವಿಶ್ವಪ್ರಿಯತೀರ್ಥ ಶ್ರೀಪಾದರನ್ನು ಹಾಗೂ ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥ ಶ್ರೀಪಾದರನ್ನು ಗಂಧಾದ್ಯುಪಚಾರಗಳಿಂದ ಗೌರವಿಸುವ ಮೂಲಕ ಸಂಭ್ರಮವನ್ನು ಹಂಚಿಕೊಂಡರು.

ಪುತ್ತಿಗೆ ಕಿರಿಯ ಸುಶ್ರಿಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮತ್ತು ಅನೇಕ ವಿದ್ವಾಂಸರ ಹಾಗೂ ಶ್ರೀಪುತ್ತಿಗೆ ವಿದ್ಯಾಪೀಠದ ಅನೇಕ ಹಳೆವಿದ್ಯಾರ್ಥಿಗಳ ಸಮ್ಮುಖದಲ್ಲಿ ಶ್ರೀಕೃಷ್ಣಮಠದಲ್ಲಿ ಜರುಗಿದ ಈ ಸಮಾರಂಭದಲ್ಲಿ ಪರ್ಯಾಯ ಮಠದ ವತಿಯಿಂದ ದಿವಾನರಾದ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ಪ್ರಸನ್ನಾಚಾರ್ಯ ಅವರು ಅದಮಾರು ಮತ್ತು ಭಂಡಾರಕೇರಿ ಶ್ರೀಪಾದರನ್ನು ಮಾಲಿಕೆ ಮಂಗಳಾರತಿ ಮಾಡಿ ಸಂಸ್ಥಾನಗೌರವವನ್ನು ಅರ್ಪಿಸಿದರು.

ಪರ್ಯಾಯ ಶ್ರೀಪಾದರು ಗಂಧಾದ್ಯುಪಚಾರಗಳನ್ನು ಮಾಡಿ ಇತರರನ್ನೂ ಸತ್ಕರಿಸಿದರು. ತಮ್ಮ ವಿದ್ಯಾಭ್ಯಾಸಕಾಲವನ್ನು ಸ್ಮರಿಸುತ್ತಾ ತಮ್ಮ ಈರ್ವರು ಸಹಪಾಠಿಗಳ ಉಪಸ್ಥಿತಿಯಲ್ಲಿ ತಮ್ಮ ಜನ್ಮದಿನಾಚರಣೆಯನ್ನು ಮಾಡಿಕೊಳ್ಳುತ್ತಿರುವ ಬಗ್ಗೆ ಅತ್ಯಂತ ಸಂತಸ ವ್ಯಕ್ತಪಡಿಸುತ್ತಾ ತಮ್ಮೆಲ್ಲ ಸಾಧನೆಗಳಿಗೆ ಸ್ಫೂರ್ತಿದಾಯಕ ರಾಗಿ ವಿಬುಧೇಶತೀರ್ಥರ ನೆನಪಲ್ಲಿ ವಿಶ್ವಪ್ರಿಯರನ್ನು, ಗುರು ವಿದ್ಯಾಮಾನ್ಯರ ಪ್ರತೀಕರಾಗಿ ಶ್ರೀ ಶ್ರೀ ವಿದ್ವೇಶತೀರ್ಥರನ್ನು ಕಾಣುತ್ತಿದ್ದೇವೆ. ಇವರಿಬ್ಬರ ಆಶೀರ್ವಾದ ಫಲವನ್ನು ಇಲ್ಲಿ ನೋಡುತ್ತಿದ್ದೇವೆ ಎಂದು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಅದಮಾರು ಶ್ರೀಪಾದರು ಶ್ರೀಪುತ್ತಿಗೆ ಶ್ರೀಗಳನ್ನು ಶಾಲು ಹೊದಿಸಿ ಸನ್ಮಾನಿಸುತ್ತಾ ಶ್ರೀಪಾದರು ವಿಶ್ವಂಭರನೆನಿಸಿದ ಗಣೇಶನ ಹಬ್ಬದ ದಿನಗಳ ಮಧ್ಯೆ ಹುಟ್ಟಿದ್ದರಿಂದ ವಿಶ್ವದಾದ್ಯಂತ ಧರ್ಮಪ್ರಚಾರ ಮಾಡುತ್ತಾ ವಿಶ್ವಂಭರನ ಕೃಪೆಗೆ ಪಾತ್ರರಾಗಿದ್ದಾರೆ. ಇವರ ಸಾಧನೆ ಇನ್ನಷ್ಟು ಉತ್ತುಂಗಕ್ಕೇರಲಿ ಎಂದು ಅನುಗ್ರಹಿಸಿದರು.

ವಿಧ್ಯೆಶತೀರ್ಥ ಶ್ರೀಪಾದರು ಪುತ್ತಿಗೆ ಶ್ರೀಯವರನ್ನು ಗೌರವಿಸಿ ಮಾತನಾಡುತ್ತಾ, ಶ್ರೀಗಳ ಬಾಲ್ಯ ಸಾಧನೆಗಳನ್ನು ನೆನಪಿಸಿ, ಧರ್ಮ ಪ್ರಚಾರಕ್ಕೆ ಶ್ರೀಪಾದರು ಸುಗುಣ ವಿದ್ಯಾಪೀಠ ಮತ್ತು ಸುಗುಣಮಾಲಾ ಪತ್ರಿಕೆಗಳ ರೂಪದಲ್ಲಿ ಧರ್ಮಪ್ರಚಾರವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿರುವುದನ್ನು ಶ್ಲಾಘಿಸಿ ಶುಭಕೋರಿದರು.

ಪುತ್ತಿಗೆ ಕಿರಿಯ ಶ್ರೀಪಾದರು ಮಾತನಾಡುತ್ತಾ, ಗುರುಗಳು 63ರಂತೆ ಇಲ್ಲದೆ 36 ವರ್ಷದಂತೆ ಯುವ ಉತ್ಸಾಹದಲ್ಲಿ ಕರ್ತವ್ಯಗಳನ್ನು ನಡೆಸುತ್ತಿದ್ದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಅನುಗ್ರಹದಿಂದ ನಾವು ಸಾಧನೆ ಮಾಡುವಂತಾಗಲಿ ಎಂದು ಪ್ರಾರ್ಥಿಸಿದರು. ಗುರುಗಳಿಗೆ ಪುಷ್ಪದ ಕಿರೀಟವನ್ನು ತೊಡಿಸಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀಪಾದರ ಎರಡು ಕೃತಿಗಳನ್ನು ಅದಮಾರು ಹಿರಿಯ ಶ್ರೀಪಾದರು ಮತ್ತು ಭಂಡಾರಕೇರಿ ಶ್ರೀಪಾದರು ಬಿಡುಗಡೆಗೊಳಿಸಿದರು. ಕೃತಿಸಂಗ್ರಹವನ್ನು ಮಾಡಿ ಪ್ರಕಟಿಸಲು ಶ್ರಮಿಸಿದ ಓಂಪ್ರಕಾಶ ಭಟ್ಟರನ್ನು ಶ್ರೀಪಾದರು ಗೌರವಿಸಿದರು. ಮಠದ ವಿದ್ವಾಂಸರಾದ ವಿದ್ವಾನ್ ಬಿ. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.