ಉಡುಪಿ: ಸರಕಾರಿ ಬಸ್ಸಿನಲ್ಲಿ ಕಳೆದು ಹೋದ ಬ್ಯಾಗ್ ಪತ್ತೆಹಚ್ಚಿ ಕರ್ತವ್ಯ ಪ್ರಜ್ಞೆ ಮೆರೆದ ಕಂಟ್ರೋಲ್ ರೂಮ್ ಸಿಬ್ಬಂದಿ

ಉಡುಪಿ: ಕೆಎಸ್ ಆರ್ ಟಿಸಿ ಬಸ್ ನಲ್ಲಿ ಕಳೆದು ಹೋದ ಅರ್ಚಕರೊಬ್ಬರ ನಗದು ಸಹಿತ ಬ್ಯಾಗ್ ಅನ್ನು ಪತ್ತೆ ಮಾಡುವ ಮೂಲಕ ಉಡುಪಿ ಎಸ್ಪಿ ಕಚೇರಿಯ ಕಂಟ್ರೋಲ್ ರೂಮ್ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರ್ಯಾಯ ಅರ್ಚಕರಾದ ಶ್ರೀಧರ ತಂತ್ರಿ ಕಳತ್ತೂರು ಅವರು ಸೋಮವಾರ ರಾತ್ರಿ 11ಗಂಟೆಗೆ ಮಂಗಳೂರಿನಿಂದ ಶಿರಸಿಗೆ ಹೋಗುವ ಸರಕಾರಿ ಬಸ್ ಹತ್ತಿದ್ದಾರೆ. 12 ಗಂಟೆಗೆ ಸುಮಾರಿಗೆ ಕಾಪುವಿನಲ್ಲಿ ಇಳಿದಿದ್ದಾರೆ. ಬಸ್ ಇಳಿಯುವ ಸಂದರ್ಭದಲ್ಲಿ 18 ಸಾವಿರ ನಗದು, ಬಟ್ಟೆ, ಕಾರ್ಡ್ ಹಾಗೂ ಮೊಬೈಲ್ ಇದ್ದ ಬ್ಯಾಗ್ ಅನ್ನು ಬಸ್ಸಿನಲ್ಲೆ ಮರೆತು ಬಿಟ್ಟು ಬಂದಿದ್ದು, ವಿಷಯ ತಿಳಿದ ತಕ್ಷಣವೇ ಶಿರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಶಿರ್ವ ಠಾಣೆ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ವಯರ್ ಲೆಸ್ ಮೂಲಕ ಕಂಟ್ರೋಲ್ ರೂಮ್ ಗೆ ಮಾಹಿತಿ ರವಾನಿಸಿದರು.

ಉಡುಪಿ ಎಸ್ಪಿ ಕಚೇರಿಯ ಕಂಟ್ರೋಲ್ ರೂಮ್ ನಲ್ಲಿ ಕರ್ತವ್ಯದಲ್ಲಿ ನಿರತರಾಗಿದ್ದ ಎಸ್.ಐ ನಿತ್ಯಾನಂದ ಶೆಟ್ಟಿ ಹಾಗೂ ಕಂಟ್ರೋಲ್ ರೂಂ ಸಿಬ್ಬಂದಿ ರಾತ್ರಿಯೇ ಜಿಲ್ಲೆಯ ಎಲ್ಲಾ ಠಾಣೆಗೆ ಮಾಹಿತಿ ರವಾನಿಸಿದರು.
ಮಾಹಿತಿ ಪಡೆದ ತಕ್ಷಣವೇ ಬೈಂದೂರು ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಬೈಂದೂರು ಬಸ್ ನಿಲ್ದಾಣದಲ್ಲಿ ರಾತ್ರಿ ಊಟಕ್ಕೆ ನಿಂತ ಬಸ್ಸನ್ನು ಪರಿಶೀಲಿಸಿ ಬ್ಯಾಗನ್ನು ಹುಡುಕಿ ತಂದು ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದರು. ಸುಮಾರು 1.30ರ ಸುಮಾರಿಗೆ ಬ್ಯಾಗ್ ಕಳೆದುಕೊಂಡ ಶ್ರೀಧರ ತಂತ್ರಿ ಕಳತ್ತೂರು ಅವರಿಗೆ ಬ್ಯಾಗ್ ಸಿಕ್ಕಿದ ವಿಷಯ ತಿಳಿಸಿದರು.

ಶಿರ್ವ ಠಾಣೆ, ಕಂಟ್ರೋಲ್ ರೂಮ್ ಸಿಬ್ಬಂದಿ ಹಾಗೂ ಬೈಂದೂರು ಠಾಣಾಧಿಕಾರಿಗಳ ಕರ್ತವ್ಯ ಪ್ರಜ್ಞೆಗೆ ಜನ ಸಂಪರ್ಕ ಜನಸೇವಾ ವೇದಿಕೆ ಅಧ್ಯಕ್ಷ ದಿವಾಕರ ಬಿ ಶೆಟ್ಟಿ ಹಾಗೂ ಕಳತ್ತೂರು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.