ಉಡುಪಿ: ಸರಕಾರಿ ಬಸ್‌ನ ಮೆಟ್ಟಿಲು ತುಂಡು; ವೀಡಿಯೋ ವೈರಲ್

ಉಡುಪಿ: ಉಡುಪಿ ಜಿಲ್ಲೆಯ ಈ ವರ್ಷ ವಾಡಿಕೆಗಿಂತ ಜಾಸ್ತಿ ಮಳೆ ಸುರಿದಿದೆ. ಇದರಿಂದಾಗಿ ರಸ್ತೆ ವಿಪರೀತ ಹೊಂಡಗಳಿಂದ ತುಂಬಿದ್ದು ಸವಾರರು ಪರದಾಡುತ್ತಿದ್ದಾರೆ. ಇದೇ ವೇಳೆ ಹದಗೆಟ್ಟ ರಸ್ತೆಯಿಂದಾಗಿ ವಾಹನಗಳಿಗೂ ಸಾಕಷ್ಟು ಹಾನಿ ಉಂಟಾಗುತ್ತಿದೆ. ಉಡುಪಿ- ಕಾರ್ಕಳ ನಡುವೆ ಸಂಚರಿಸುವ ಸರಕಾರಿ ಬಸ್ಸೊಂದರ ಮೆಟ್ಟಿಲು ಸಂಪೂರ್ಣ ತುಂಡಾಗಿದ್ದು, ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ.

ಈ ಬಸ್ಸಿನಲ್ಲಿ ಪ್ರಯಾಣ ಉಚಿತ, ಅಪಾಯ ಖಚಿತ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ. ಇದೇ ವೇಳೆ ಈ ವೈರಲ್ ವಿಡಿಯೋ ಸಂಬಂಧಪಟ್ಟ ಇಲಾಖೆಗೆ ತಲುಪಿದ್ದು, ಇದು ಬಸ್ ನ ತಾಂತ್ರಿಕ ಸಮಸ್ಯೆಯಲ್ಲ, ಬದಲಾಗಿ ಹದಗೆಟ್ಟ ರಸ್ತೆಯಿಂದಾಗಿ ಈ ರೀತಿ ಆಗಿದೆ ಎಂಬ ಸಮರ್ಥನೆ ಕೂಡ ಬಂದಿದೆ. ಅದೇನೆ ಇರಲಿ, ಸಂಬಂಧ ಪಟ್ಟವರು ತಕ್ಷಣ ಇದನ್ನು ಸರಿಪಡಿಸಿ ಸಂಭಾವ್ಯ ಅಪಾಯ ತಪ್ಪಿಸಬೇಕಿದೆ.