ಉಡುಪಿ: ಸಮಾನ ಮನಸ್ಕರ ತಂಡದಿಂದ 25ನೇ ಮನೆ ಹಸ್ತಾಂತರ

ಉಡುಪಿ: ಸಮಾನ ಮನಸ್ಕರ ತಂಡ ಉಡುಪಿ ಇವರಿಂದ ಅಗತ್ಯವುಳ್ಳ ಬಡವ ಮಹಿಳೆ ಲಕ್ಷ್ಮೀ ಅವರಿಗಾಗಿ ನಿರ್ಮಿಸಿಕೊಟ್ಟಿರುವ 25ನೇ ಮನೆಯ ಹಸ್ತಾಂತರ ಕಾರ್ಯಕ್ರಮ ಕುಕ್ಕೆಹಳ್ಳಿಯಲ್ಲಿ ಜರುಗಿತು.

ನಿವೃತ್ತ ಲೋಕಾಯುಕ್ತ ಡಾ. ಸಂತೋಶ್ ಹೆಗ್ಡೆ 25 ನೇ ಮನೆಯನ್ನು ಹಸ್ತಾಂತರಿಸಿ ಮಾತನಾಡಿ, ಇದೊಂದು ಸುಂದರ ಹಾಗೂ ಅರ್ಥಪೂರ್ಣವಾದ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಮಾನವೀಯ ಮೌಲ್ಯವನ್ನು ಬಿತ್ತಲು ಸಹಕಾರಿಯಾಗುತ್ತದೆ. ಜೀವನದಲ್ಲಿ ಮಾನವೀಯತೆಯನ್ನು ಅಳವಡಿಕೊಂಡಾಗ ಒಳ್ಳೆಯ ಮನುಷ್ಯರಾಗಬಹುದು. ಈ ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದರು.

Oplus_0

ತಂಡದ ಮುಖ್ಯಸ್ಥರಾದ ಶಶಿಧರ ಪುರೋಹಿತ್ ಕಟಪಾಡಿ ಮಾತನಾಡಿ, ಸಮಾನ ಮನಸ್ಕರೆಂಬ ತಂಡವನ್ನು ರಚಿಸಿ ಗರಡೆಯಲ್ಲಿ ಮೊದಲ ಮನೆಯನ್ನು ನಿರ್ಮಿಸಲಾಯಿತು. ಇಂದು ಕುಕ್ಕೆಹಳ್ಳಿಯಲ್ಲಿ 25ನೇ ಮನೆ ಹಸ್ತಾಂತರಗೊಂಡಿದೆ. ಇನ್ನೂ ಮೂರು ಮನೆಗಳು ನಿರ್ಮಾಣ ಹಂತದಲ್ಲಿವೆ. ನಮ್ಮ ತಂಡದವರು ವಾಟ್ಸಾಪ್ ಗ್ರೂಪ್ ರಚಿಸುವುದರ ಮೂಲಕ ಒಂದು ಮನೆಯ ನಿರ್ಮಾಣಕ್ಕೆ 50-60 ಮಂದಿಯನ್ನು ಆ ಗ್ರೂಪ್ ನಲ್ಲಿ ಸೇರಿಸಿಕೊಂಡು ಹಣ ಹಾಗೂ ವಸ್ತು ರೂಪದ ಮೂಲಕ ದಾನವನ್ನು ಪಡೆದು ಮನೆಗಳನ್ನು ನಿರ್ಮಿಸುತ್ತಿದ್ದೇವೆ. ಈ ವರೆಗೆ 25 ಮನೆಗಳ ನಿರ್ಮಾಣಕ್ಕಾಗಿ ಸುಮಾರು ರೂ 2.5 ಕೋಟಿಯಷ್ಟು ಹಣ ವ್ಯಯಿಸಿದ್ದು ಎಲ್ಲವೂ ದಾನಿಗಳ ನೆರವಿನಿಂದ ಸಾಧ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಧವ ಆಚಾರ್ಯ ಪುತ್ತೂರು, ರಾಜಗೋಪಾಲ್ ಆಚಾರ್ಯ ಕೋಟೇಶ್ವರ , ಉಪೇಂದ್ರ ಆಚಾರ್ಯ ಪೆರ್ಡೂರ್, ರಾಘವೇಂದ್ರ ಆಚಾರ್ಯ ಕೋಟ. ಪುರಂದರ ಕೋಟ್ಯಾನ್ ಕುಕ್ಕೆಹಳ್ಳಿ ,ಪ್ರಕಾಶ್ ಆಚಾರ್ಯ ಕಾರ್ಕಳ, ಸತೀಶ್ ರಾವ್ ಮಂಗಳೂರು ಹಾಗೂ ಇತರರು ಉಪಸ್ಥಿತರಿದ್ದರು