ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಂದ ಧರಣಿ

ಉಡುಪಿ: ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಧರಣಿ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸರಕಾರದ ವಿರುದ್ಧ ದಿಕ್ಕಾರ ಕೂಗಿದರು. ಅಂಗನವಾಡಿ ನೌಕರರನ್ನು ಸರಕಾರವು ಸಾಮಾಜಿಕ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸದೆ ಕೇವಲ ದುಡುಮೆಗಾಗಿ ಬಳಸಿಕೊಂಡು ಶೋಷಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Oplus_0

6ನೇ ಗ್ಯಾರಂಟಿ ಯೋಜನೆಯಡಿ ಕಾರ್ಯಕರ್ತೆಯರಿಗೆ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ಗೌರವಧನ ಹೆಚ್ಚಿಸಬೇಕು. ನಿವೃತ್ತಿಯಾದವರಿಗೆ 3 ಲಕ್ಷ ಇಡುಗಂಟು ಜಾರಿಗೊಳಿಸಬೇಕು. 2023ರ ಏಪ್ರಿಲ್ 1ರಿಂದ ನಿವೃತ್ತಿಯಾದವರಿಗೆ ಗಾಜ್ಯುಟಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು 5ನೇ ತಾರೀಕಿನೊಳಗೆ ಗೌರವ ಧನ ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.

ಧರಣಿ ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘದ ಅಧ್ಯಕ್ಷೆ ಫಿಲೋಮೀನಾ ಫೆರ್ನಾಂಡಿಸ್ ಅವರು, ಬಜೆಟ್ ಇಲ್ಲ ಎಂಬ ನೆಪವೊಡ್ಡಿ ಅಂಗನವಾಡಿ ನೌಕರರಿಗೆ ಗೌರವಧನ ನೀಡಲು ಸರಕಾರ ವಿಳಂಬ ಮಾಡುತ್ತಿದೆ. ಎಲ್ಲಾ ಇಲಾಖೆಗಳಿಗೂ ಸರಿಯಾದ ಸಮಯಕ್ಕೆ ವೇತನ ಆಗುತ್ತದೆ. ಆದರೆ ಅಂಗನವಾಡಿ ನೌಕರರಿಗೆ ಮೂರ್ನಾಲ್ಕು ತಿಂಗಳಿಗೊಮ್ಮೆ ಗೌರವಧನ ನೀಡುತ್ತಿದೆ. ಗೌರವಧನ ನೀಡಲು ಮೀನಾಮೇಷ ಎನಿಸುತ್ತಿದೆ. ಇನ್ಮುಂದೆ ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಗೌರವಧನ ನೀಡಬೇಕು. ಇಲ್ಲದಿದ್ದರೆ ನಾವು ಯಾವುದೇ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ಮುಷ್ಕರ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಸಂಘದ ಕಾರ್ಯದರ್ಶಿ ಬೇಬಿ ಶೆಟ್ಟಿ, ಕೋಶಾಧಿಕಾರಿ ಪದ್ಮಾವತಿ ಅಮೀನ್ ಹಾಗೂ ನೂರಾರು ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಪಾಲ್ಗೊಂಡಿದ್ದರು.