ಉಡುಪಿ: ಉಡುಪಿಯ ಬ್ರಹ್ಮಗಿರಿಯಲ್ಲಿ ಆ.1 ರಂದು ಮುಂಜಾನೆ ನಾಲ್ವರು ಮುಸುಕುಧಾರಿಗಳ ಗುಂಪೊಂದು ನಗರದ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ ವೊಂದಕ್ಕೆ ನುಗ್ಗಲು ಯತ್ನಿಸಿ, ವಿಫಲರಾಗಿ ಸ್ಥಳದಿಂದ ವಾಪಸ್ಸಾಗಿರುವ ಘಟನೆ ನಡೆದಿದ್ದು, ಅಪಾರ್ಟ್ ಮೆಂಟ್ ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಾಲ್ವರು ಮುಸುಕುಧಾರಿಗಳು ರಾಡ್ ಗಳನ್ನು ಹಿಡಿದು ಶಸ್ತ್ರಸಜ್ಜಿತವಾಗಿ ಅಪಾರ್ಟ್ ಮೆಂಟ್ ಗೆ ನುಗ್ಗಲು ಯತ್ನಿಸಿದ್ದಾರೆ. ನಾಲ್ವರು ಕೂಡಾ ತಮ್ಮ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡು ಫ್ಲ್ಯಾಟ್ ಒಳಗೆ ನುಗ್ಗಲು ಯತ್ನಿಸಿರುವುದು, ಅಪಾರ್ಟ್ ಮೆಂಟ್ಗೆ ಪ್ರವೇಶಿಸಲು ವಿಫಲರಾಗಿ ಸ್ಥಳದಿಂದ ಹಿಂದಿರುಗಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ.
ಮುಸುಕುಧಾರಿಗಳು ಒಳನುಗ್ಗಲು ಯತ್ನಿಸಿದ ಫ್ಲ್ಯಾಟ್ ನಲ್ಲಿ ವಯಸ್ಸಾದ ದಂಪತಿ ವಾಸಿಸುತ್ತಿದ್ದರು. ಈ ದಂಪತಿ ಒಂದು ವಾರದ ಹಿಂದೆ ಮುಂಬೈಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಈ ಮುಸುಕುಧಾರಿಗಳು ಒಂದೇ ಬಡಾವಣೆಯ ಒಟ್ಟು ಮೂರು ಅಪಾರ್ಟ್ ಮೆಂಟ್ ಕಟ್ಟಡಗಳ ದರೋಡೆಗೆ ಯತ್ನಿಸಿದ್ದರು ಎನ್ನಲಾಗಿದೆ. ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.