ಉಡುಪಿ: ಉಡುಪಿ ಅಡ್ವಕೇಟ್ ವೆಲ್ಫೇರ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ ಆಶ್ರಯದಲ್ಲಿ ಕುಂದಾಪುರ ವಕೀಲರ ಸಂಘದ ಸಹಯೋಗದಲ್ಲಿ ಹಿರಿಯ ವಕೀಲ ಚೇರ್ಕಾಡಿ ವಿಜಯ್ ಹೆಗ್ಡೆ ಸ್ಮರಣಾರ್ಥ ಅಂತರ್ ರಾಜ್ಯ ಮಟ್ಟದ ಪುರುಷರ ಕ್ರಿಕೆಟ್ , ವಾಲಿಬಾಲ್ ಹಾಗೂ ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಕೂಟವನ್ನು ಇದೇ ಮಾ. 8 ಮತ್ತು ಮತ್ತು 9ರಂದು ನಗರದ ಎಂಜಿಎಂ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ನ ಅಧ್ಯಕ್ಷ ದೇವದಾಸ್ ಶೆಟ್ಟಿಗಾರ್ ತಿಳಿಸಿದರು.
ಈ ಕುರಿತು ಉಡುಪಿ ಕಿದಿಯೂರು ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕ್ರಿಕೆಟ್‌ನಲ್ಲಿ ರಾಜ್ಯದ 18 ಹಾಗೂ ಮಹಾರಾಷ್ಟ್ರ, ತಮಿಳುನಾಡು, ಕೇರಳದ ಆರು ಸೇರಿದಂತೆ ಒಟ್ಟು 24 ಆಯ್ದ ತಂಡಗಳು, ವಾಲಿಬಾಲ್‌ನಲ್ಲಿ 16 ಮತ್ತು ತ್ರೋಬಾಲ್‌ನಲ್ಲಿ 12 ತಂಡಗಳು ಭಾಗವಹಿಸಲಿವೆ. ವಿಜೇತರಿಗೆ ಕ್ರಿಕೆಟ್‌ನಲ್ಲಿ ಪ್ರಥಮ 1ಲಕ್ಷ ರೂ., ದ್ವಿತೀಯ 60ಸಾವಿರ ರೂ., ವಾಲಿಬಾಲ್‌ನಲ್ಲಿ ಪ್ರಥಮ 50ಸಾವಿರ ರೂ., ದ್ವಿತೀಯ 25ಸಾವಿರ ರೂ., ತೃತೀಯ 14ಸಾವಿರ ರೂ., ನಾಲ್ಕನೇ 10ಸಾವಿರ ರೂ. ಮತ್ತು ತ್ರೋಬಾಲ್‌ನಲ್ಲಿ ಪ್ರಥಮ 30ಸಾವಿರ ರೂ., ದ್ವಿತೀಯ 20ಸಾವಿರ ರೂ., ತೃತೀಯ 10ಸಾವಿರ ರೂ., ನಾಲ್ಕನೇ 7ಸಾವಿರ ರೂ. ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುವುದು ಎಂದರು.
ಪಂದ್ಯಕೂಟವನ್ನು ಮಾ.8ರಂದು ಬೆಳಗ್ಗೆ 9ಗಂಟೆಗೆ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ವಹಿಸಲಿದ್ದಾರೆ. ಸಂಜೆ 6.30ಕ್ಕೆ ನಡೆಯುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವೈದ್ಯೆ ಡಾ.ಶ್ರುತಿ ಬಲ್ಲಾಳ್ ಭಾಷಣ ಮಾಡಲಿದ್ದಾರೆ. ಮಾ.9ರಂದು ಸಂಜೆ 6ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ವಕೀಲ ವಿಕ್ರಮ ಹೆಗ್ಡೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ಉಳಿದ ಹಣವನ್ನು ಉಡುಪಿ ವಕೀಲರಿಗೆ ಅನಾರೋಗ್ಯದ ಸಂದರ್ಭದಲ್ಲಿ ತುರ್ತುನಿಧಿಯಾಗಿ ಅಥವಾ ಅನಾರೋಗ್ಯ ವಿಮಾ ಸೌಲಭ್ಯ ಒದಗಿಸುವ ಉದ್ದೇಶಕ್ಕೆ ಬಳಸಲು ನಿರ್ಧರಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ರತ್ನಾಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಖಿಲ್ ಹೆಗ್ಡೆ, ಖಜಾಂಚಿ ವೈ.ಟಿ. ರಾಘವೇಂದ್ರ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ಹಂದೆ, ಹಿರಿಯ ವಕೀಲರಾದ ವಾಣಿ ರಾವ್, ಗೀತಾ ಕೌಶಿಕ್ ಮೊದಲಾದವರು ಉಪಸ್ಥಿತರಿದ್ದರು..












