ಉಡುಪಿ: ಮಹಿಳೆಗೆ ಚುಡಾಯಿಸಿದ ಪ್ರಕರಣ: ಆರೋಪಿ ಠಾಣೆಯಲ್ಲೇ ಮೃತ್ಯು

ಉಡುಪಿ: ಮಹಿಳೆಗೆ ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದ ಆರೋಪಿ ಠಾಣೆಯಲ್ಲೇ ಮೃತಪಟ್ಟಿದ್ದಾನೆ.

ಬ್ರಹ್ಮಾವರ ಪೊಲೀಸ್ ಠಾಣೆಯ ಸೆಲ್ ನ ಬಾತ್ ರೂಮಿನಲ್ಲಿ ಈ ಘಟನೆ ನಡೆದಿದೆ.

ಮೃತರನ್ನು ಕೇರಳ ರಾಜ್ಯ ಕೊಲ್ಲಂ ಮೂಲದ ಬಿಜು ಮೋಹನ್(42) ಎಂದು ಗುರುತಿಸಲಾಗಿದೆ.

ಈತ ಹಂಗಾರಕಟ್ಟೆ ಮೀನು ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಮೂರು ದಿನಗಳ ಹಿಂದೆಯಷ್ಟೆ ಇಲ್ಲಿಗೆ ಕೆಲಸಕ್ಕೆ ಸೇರಿಕೊಂಡಿದ್ದನು. ಸೂರಬೆಟ್ಟು ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಿಜು ಮೋಹನ್, ನ.9ರಂದು ರಾತ್ರಿ ವೇಳೆ ಅಲ್ಲೇ ಸಮೀಪದ ಮನೆಯಲ್ಲಿ ವಾಸವಿದ್ದ ಮಹಿಳೆಯನ್ನು ಚುಡಾಯಿಸಿದ್ದರು ಎಂದು ದೂರಲಾಗಿದೆ.


ಆ ವೇಳೆ ಮಹಿಳೆ ಬೊಬ್ಬೆ ಹಾಕಿದ್ದು, ಸ್ಥಳೀಯರು ಜಮಾಯಿಸಿ ಬಿಜು ಮೋಹನ್ ನನ್ನು ಹಿಡಿದು ಮನೆಯೊಳಗೆ ಕೂಡಿ ಹಾಕಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದಿದ್ದರು ಎಂದು ತಿಳಿದುಬಂದಿದೆ.

ಬಿಜು ಮೋಹನ್ ರನ್ನು ಸೆಲ್ನಲ್ಲಿ ಇರಿಸಲಾಗಿದ್ದು, ಇಂದು ನಸುಕಿನ ವೇಳೆ 3:30ರ ಸುಮಾರಿಗೆ ಆತ ಸಮೀಪದ ಬಾತ್ ರೂಮಿನಲ್ಲಿ ಕುಸಿದುಬಿದ್ದಿರುವುದು ಕಂಡುಬಂದಿದೆ.

ತಕ್ಷಣ ಆತನನ್ನು ಬ್ರಹ್ಮಾವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮೋಹನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.