ಉಡುಪಿ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅತ್ಯುನ್ನತ ಸೇವೆಗಾಗಿ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್ ಬಿ ವಿಭಾಗದಲ್ಲಿ ಸಿವಿಲ್ ಹೆಡ್ ಕಾನ್ ಸ್ಟೇಬಲ್ ಆಗಿ ಸೇವೆಸಲ್ಲಿಸುತ್ತಿರುವ ಬಿ. ವಿಜಯ್ ಕುಮಾರ್ ಅವರಿಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
ಇವರು 1993ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು, 31 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈವರೆಗೆ ಪಣಂಬೂರು, ಪುತ್ತೂರು ನಗರ, ಉರ್ವ, ಉಡುಪಿ ನಗರ, ಕುಂದಾಪುರ, ಉಡುಪಿ ಟ್ರಾಫಿಕ್, ಉಡುಪಿ ಮಹಿಳಾ ಠಾಣೆ ಮತ್ತು ಹಿರಿಯಡ್ಕ ಠಾಣೆಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. 2022ರಲ್ಲಿ ಇವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ಮೂಲತಃ ಬೆಳ್ತಂಗಡಿಯ ಕೆಲ್ಲಗುತ್ತು ನಿವಾಸಿಯಾಗಿದ್ದು, ದಿ. ಗೋಪಾಲಕೃಷ್ಣ ಮತ್ತು ಶಾರದಾ ದಂತಿಯ ಸುಪುತ್ರರಾಗಿರುತ್ತಾರೆ.