ಉಡುಪಿ: ಅರ್ಧಕ್ಕೆ ಸ್ಥಗಿತಗೊಂಡಿರುವ ಉಡುಪಿ ನಗರದ ಹೃದಯಭಾಗದ ಕೆ.ಎಂ.ಮಾರ್ಗದಲ್ಲಿರುವ ಬಿ.ಆರ್. ಕಂಪೆನಿಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ತೆಗೆದಿರುವ ಬಹೃತ್ ಗುಂಡಿಯನ್ನು ಮುಚ್ಚುವಂತೆ ಆಗ್ರಹಿಸಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಇಂದು ವಿನೂತನವಾದ ಅಪಾಯಕಾರಿ ಪ್ರತಿಭಟನೆ ನಡೆಸಿದರು.
ಕ್ರೇನ್ ಮೂಲಕ ಮಳೆ ನೀರು ತುಂಬಿರುವ ಅಪಾಯಕಾರಿ ಗುಂಡಿಯ ನೀರಿನ ಮಟ್ಟದವರೆಗೆ ಇಳಿದ ಒಳಕಾಡು ಅವರು, ಎಚ್ಚರಿಕೆಯ ಫಲಕವನ್ನು ನೀರಿನಲ್ಲಿ ತೇಲಿಬಿಟ್ಟರು. ಉಡುಪಿ ನಾಗರಿಕ ಸಮಿತಿಯ ನೇತೃತ್ವದಲ್ಲಿ ಈ ವಿನೂತನ ಪ್ರತಿಭಟನೆ ನಡೆಯಿತು. ತಮಟೆ, ಎಚ್ಚರಿಕೆಯ ಫಲಕದೊಂದಿಗೆ ಕ್ರೇನ್ ಡಬ್ಬಿಯಲ್ಲಿ ಕುಳಿತ ಅವರು, ತಮಟೆ ಬಾರಿಸಿಕೊಂಡು ಕೃತಕ ನೆರೆ ಸೃಷ್ಟಿಯಾಗಿರುವ ಗುಂಡಿಯ ನೀರಿನ ಮಟ್ಟದವರೆಗೆ ನಿಧಾನವಾಗಿ ಇಳಿದರು. ಬಳಿಕ ಎಚ್ಚರಿಕೆಯ ಫಲಕವನ್ನು ನೀರಿನಲ್ಲಿ ತೇಲಿಬಿಟ್ಟರು.



ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಿತ್ಯಾನಂದ ಒಳಕಾಡು ಅವರು, ಬಿ.ಆರ್. ಕಂಪೆನಿಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲು ತೆಗೆದ ಬೃಹತ್ ಗುಂಡಿಯಲ್ಲಿ ಮಳೆ ನೀರು ತುಂಬಿ ಕೃತಕ ನೆರೆ ಸೃಷ್ಟಿಯಾಗಿದೆ. ಇದರಿಂದ ಸುತ್ತಮುತ್ತಲಿನ ಪರಿಸರದಲ್ಲಿ ಆತಂಕ ಮತ್ತು ಬಹುಮಹಡಿ ಕಟ್ಟಡಗಳಿಗೆ ಅಪಾಯದ ಸ್ಥಿತಿ ಎದುರಾಗಿದೆ. ಅಲ್ಲದೆ, ಈ ಗುಂಡಿ ಸೊಳ್ಳೆ ಉತ್ಪತ್ತಿಯ ಕೇಂದ್ರವಾಗಿ ಮಾರ್ಪಟ್ಟಿದ್ದು, ಡೆಂಗ್ಯೂನಂತಹ ಮಾರಕ ರೋಗವನ್ನು ಹರಡುವ ಸಾಧ್ಯತೆ ಇದೆ. ಹೀಗಾಗಿ ಈ ಗುಂಡಿಯನ್ನು ಕೂಡಲೇ ಮುಚ್ಚಿ ಮುಂದೆ ಆಗಬಹುದಂತಹ ಅನಾಹುತಗಳನ್ನು ತಪ್ಪಿಸಬೇಕೆಂದು ಅವರು ಸರಕಾರವನ್ನು ಆಗ್ರಹಿಸಿದರು.
ಮನೋವೈದ್ಯ ಡಾ. ಪಿ.ವಿ. ಭಂಡಾರಿ ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳು ಕೂಡಲೇ ಅಪಾಯಕಾರಿ ಗುಂಡಿಯನ್ನು ಪರಿಶೀಲಿಸಬೇಕು. ಅಲ್ಲದೆ, 10 ದಿನಗಳೊಳಗೆ ಗುಂಡಿಯನ್ನು ಮುಚ್ಚಿಸಬೇಕು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹಾಜಿ ಅಬ್ದುಲ್ ಸಾಹೇಬ್ ಅವರು ಸರಕಾರಕ್ಕೆ ಜಾಗ ದಾನ ಮಾಡಿರುವುದು ಗುಂಡಿ ತೆಗೆಯಲು ಅಲ್ಲ. ಸರಕಾರದ ಕೈಯಲ್ಲಿ ಇರಬೇಕಾದ ಜಾಗ ಆರು ವರ್ಷಗಳಿಂದ ನಿಷ್ಪ್ರಯೋಜಕವಾಗಿ ಬಿದ್ದಿದೆ. ಇದಕ್ಕೆ ಯಾರು ಜವಾಬ್ದಾರಿ. ಸಿಎಂ ಸಿದ್ದರಾಮಯ್ಯ ಸರಕಾರವು ಸರಕಾರಿ ಜಾಗವನ್ನು ಖಾಸಗಿಯವರ ಪರಭಾರೆಗೆ ಕೊಟ್ಟು ಒಮ್ಮೆ ತಪ್ಪು ಮಾಡಿತ್ತು. ಈಗ ಈ ಜಾಗವನ್ನು ಖಾಲಿ ಬಿಟ್ಟು ಮತ್ತೆ ತಪ್ಪು ಮಾಡುತ್ತಿದೆ. ಇಲ್ಲಿ ಸೊಳ್ಳೆ ಉತ್ಪತ್ತಿಯಾಗಿ ನಾಗರಿಕರ ಆರೋಗ್ಯದ ಮೇಲೂ ತೊಂದರೆ ಆಗುತ್ತಿದೆ. ಇದನ್ನೆಲ್ಲ ನೋಡಿಕೊಂಡು ಸರಕಾರ ಸುಮ್ಮನೆ ಇರುವುದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು.
ಪ್ರಾಣದ ಅಪಾಯವನ್ನು ಲೆಕ್ಕಿಸದೆ ನಿತ್ಯಾನಂದ ಒಳಕಾಡು ಅವರು ಪ್ರತಿಭಟನೆ ನಡೆಸಿರುವುದು ಶ್ಲಾಘನೀಯ ಎಂದರು.












