ಉಡುಪಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ 37 ವರ್ಷ ಜೈಲುಶಿಕ್ಷೆ

ಉಡುಪಿ: ಎರಡು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೊ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯವು 37 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದೆ.

2022ರಲ್ಲಿ ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಕೋಟ ನಿವಾಸಿ ಸಚಿನ್ ಪೂಜಾರಿ(26) ಶಿಕ್ಷೆಗೆ ಒಳಗಾದ ಆರೋಪಿ. ಈತ ನೊಂದ ಬಾಲಕಿಯ ಮನೆ ಕೆಲಸಕ್ಕೆ ಬರುತ್ತಿದ್ದವಳ ಸಂಬಂಧಿಕನಾಗಿದ್ದು, ಆಕೆಯಿಂದ ಬಾಲಕಿಯ ಮೊಬೈಲ್ ನಂಬರ್ ಪಡೆದುಕೊಂಡು ಮೊಬೈಲ್‌ನಲ್ಲಿ ಚಾಟಿಂಗ್ ಮಾಡುತ್ತಿದ್ದನು. ಬಳಿಕ ಬಾಲಕಿಯ ಅಶ್ಲೀಲ ಫೋಟೋವನ್ನು ತಯಾರಿಸಿಕೊಂಡಿದ್ದನು. ಅದನ್ನು ವೈರಲ್ ಮಾಡುವುದಾಗಿ ಹೆದರಿಸಿ ನೊಂದ ಬಾಲಕಿಯಿಂದ ಹಲವು ಬಾರಿ ಲಕ್ಷಾಂತರ ರೂ. ಹಣವನ್ನು ಪಡೆದುಕೊಂಡಿದ್ದನು. 2020ರ ಸೆಪ್ಟೆಂಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಕೆಯನ್ನು ಎರಡು ಮೂರು ಬಾರಿ ಬಲವಂತವಾಗಿ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದನು. ಮತ್ತೆ ಹಣ ಹಾಗೂ ಚಿನ್ನಾಭರಣ ನೀಡುವಂತೆ ಪೀಡಿಸುತ್ತಿದ್ದನು. ಮನೆಯಿಂದ ಕಾಣೆಯಾಗುತ್ತಿರುವ ಚಿನ್ನಾಭರಣ, ಹಣವನ್ನು ಮನೆಯವರು ಹುಡುಕುವಾಗ ಬಾಲಕಿ ಈ ಎಲ್ಲ ಘಟನೆಯ ಬಗ್ಗೆ ಮನೆಯವರಿಗೆ ತಿಳಿಸಿದಳು. ಅದರಂತೆ ನೀಡಿದ ದೂರಿನಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನೊಂದ ಬಾಲಕಿಯ ಸಾಕ್ಷಿ ಮತ್ತು ಸಾಂಧರ್ಭಿಕ ಸಾಕ್ಷಿ ಮತ್ತು ಆರೋಪಿಯಿಂದ ವಶಪಡಿಸಲಾದ ಚಿನ್ನಾಭರಣ ಗಳಿಂದ ಇತರ ಸಾಕ್ಷಿದಾರರೂ ಕೂಡ ಅಭಿಯೋಜನೆ ಪರವಾಗಿ ಸಾಕ್ಷಿ ನುಡಿದಿದ್ದು, ಅದರಂತೆ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅಭಿಪ್ರಾಯಪಟ್ಟರು.

ಬಾಲಕಿಯನ್ನು ಅಪಹರಿಸಿದಕ್ಕೆ 5ವರ್ಷ ಕಠಿಣ ಜೈಲುಶಿಕ್ಷೆ ಮತ್ತು 5000ರೂ. ದಂಡ, ಅತ್ಯಾಚಾರಕ್ಕೆ ಸಂಬಂಧಿಸಿ 10ವರ್ಷ ಕಠಿಣ ಶಿಕ್ಷೆ ಮತ್ತು 10ಸಾವಿರ ರೂ. ದಂಡ, ಬಲವಂತವಾಗಿ ಹಣ ಮತ್ತು ಚಿನ್ನಾಭರಣ ಪಡೆದ ಪ್ರಕರಣಕ್ಕೆ ಒಂದು ವರ್ಷ ಜೈಲುಶಿಕ್ಷೆ ಮತ್ತು 3000ರೂ. ದಂಡ, ಬೆದರಿಕೆಗೆ ಒಂದು ವರ್ಷ ಜೈಲುಶಿಕ್ಷೆ ಮತ್ತು 2ಸಾವಿರ ರೂ. ದಂಡ, ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ 20ವರ್ಷ ಜೈಲುಶಿಕ್ಷೆ ಮತ್ತು 20ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು. ಆರೋಪಿಯು ಎಲ್ಲ ಶಿಕ್ಷೆಯನ್ನು ಒಟ್ಟಾಗಿ ಅನುಭವಿಸುವಂತೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದ ಮಂಡಿಸಿದ್ದರು.