ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.

ಉಡುಪಿ: ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಿಂದ ಅಜ್ಜರಕಾಡು ಟೌನ್ ಹಾಲ್ ನಲ್ಲಿ ಜೂ.22 ಶನಿವಾರ ಪೂರ್ವಾಹ್ನ ಗಂಟೆ 10ಕ್ಕೆ ಸುಮಾರು 12.00 ಲಕ್ಷ ರೂ. ಮೌಲ್ಯದ ನೋಟ್ ಪುಸ್ತಕ, ಶೈಕ್ಷಣಿಕ ಪರಿಕಗಳ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ.
ಸಹಕಾರ ಕ್ಷೇತ್ರದಲ್ಲಿ ಸಾಧನೆಗೆ ಹೆಸರಾಗಿ, ಸತತ ಸಾಧನೆಯನ್ನು ಮಾಡುತ್ತಲೇ ಸಮಾಜದ ಎಲ್ಲಾ ವರ್ಗಗಳ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ ವಿವಿಧ ಸಾಮಾಜಿಕ, ಆರ್ಥಿಕ ಸೇವೆಗಳನ್ನು ನಿಸ್ವಾರ್ಥ ಮನೋಭಾವನೆಯೊಂದಿಗೆ, ಜವಾಬ್ದಾರಿಯುತ ಕಾರ್ಯವೈಖರಿಯೊಂದಿಗೆ ನಿರ್ವಹಿಸಿ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಶತಮಾನೋತ್ಸವವನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿರುವ ಉಡುಪಿಯ ಪ್ರತಿಷ್ಠಿತ ಸಹಕಾರ ಸಂಘ ಬಡಗಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್. 1980ರಲ್ಲಿ ಕೇವಲ 306 ಸದಸ್ಯರಿಂದ ರೂ.6,200/- ಪಾಲು ಬಂಡವಾಳ ಮತ್ತು ರೂ.4,664 ಠೇವಣಿ ಹೊಂದಿದ್ದ ಸಂಘದ ವಾರ್ಷಿಕ ವಹಿವಾಟು ಪ್ರಸಕ್ತವಾಗಿ ದಿನವೊಂದಕ್ಕೆ 4.50 ಕೋಟಿ ರೂ.ಗೂ ಮೀರಿರುವುದು ಪ್ರಗತಿಯ ದ್ಯೋತಕವಾಗಿದೆ.

2023-24 ಆರ್ಥಿಕ ವರ್ಷಾಂತ್ಯಕ್ಕೆ ಇದ್ದಂತೆ 18,307 ಸದಸ್ಯರಿಂದ ರೂ. 4.77 ಕೋಟಿ ಪಾಲು ಬಂಡವಾಳ ಹಾಗೂ ರೂ.509.55 ಕೋಟಿ ಠೇವಣಿಯನ್ನು ಸಂಗ್ರಹಿಸಿ, ಸ್ವತಂತ್ರ ಹಾಗೂ ಸ್ವಾವಲಂಬಿ ಘಟಕವಾಗಿ ಪರಿಗಣಿತವಾಗಿದ್ದು, 402.10 ಕೋಟಿ ರೂ. ಸದಸ್ಯರ ಹೊರಬಾಕಿ ಸಾಲ ಇರುತ್ತದೆ. ಸಂಘವು 2023-24ನೇ ಸಾಲಿನಲ್ಲಿ ಸರಿಸುಮಾರು ರೂ.2,400 ಕೋಟಿ ವ್ಯವಹಾರ ನಡೆಸಿ ರೂ.15 ಕೋಟಿಗೂ ಮಿಕ್ಕಿ ಲಾಭಗಳಿಸಿ ಜಿಲ್ಲೆಯಲ್ಲೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರ ಸಂಘವಾಗಿ ಪರಿಗಣಿಸಲ್ಪಟ್ಟಿರುವುದು ಗುಣಾತ್ಮಕ ಸಂಗತಿಯಾಗಿದೆ. ವಿಶ್ವಾಸಾರ್ಹ ವ್ಯವಹಾರದೊಂದಿಗೆ ಪರೋಪಕಾರಿ ವಿಶೇಷತೆಗಳಿಗೆ ಸದಾ ಸಾಬೀತಾಗುತ್ತಿರುವ ಸಂಘವು ಆಧುನಿಕತೆಗೆ ಹೊಂದಿಕೊಂಡು ಸದಸ್ಯ ಗ್ರಾಹಕರಿಗೆ ವಿವಿಧ ರೀತಿಯ ಸೇವೆ ಹಾಗೂ ಆರ್ಥಿಕ ಸೌಲಭ್ಯಗಳನ್ನು ನೀಡುತ್ತಿದ್ದು ಸಹಕಾರ ಇಲಾಖೆಯಿಂದ ಎ ವರ್ಗ ದ ಸಂಘವಾಗಿ ಗುರುತಿಸಲ್ಪಟ್ಟಿದೆ. ಪರಸ್ಪರ ಸಹಕಾರಿ ಸದಾಶಯಗಳನ್ನು ಸಾಕಾರಗೊಳಿಸುವ ಆದ್ಯತೆಯನ್ವಯ ಉಡುಪಿ ಜಿಲ್ಲೆಯಾದ್ಯಂತ ಒಟ್ಟು 11 ಶಾಖೆಗಳನ್ನು ಹೊಂದಿದ್ದು, ಈ ಪೈಕಿ 8 ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸಂಘವು ಅಭಿವೃದ್ಧಿಯ ಮೂಲಮಂತ್ರವನ್ನು ಪ್ರತಿಯೊಂದು ಹಂತದಲ್ಲೂ ಸಾಕಾರಗೊಳಿಸಿ, ಹೊಸತನದ ಸಮೀಕರಣದೊಂದಿಗೆ ಗ್ರಾಹಕರಿಗೆ ಉತ್ಕೃಷ್ಟ ಸೇವೆಯನ್ನು ನೀಡುತ್ತಿದ್ದು, ಕೇವಲ ಲಾಭ ಗಳಿಸುವ ಉದ್ದೇಶಕ್ಕೆ ಸೀಮಿತವಾಗದೆ “ಸಾಮಾಜಿಕ ಕಳಕಳಿ” ಎಂಬ ಸಹಕಾರಿ ತತ್ವವನ್ನು ಅಳವಡಿಸಿಕೊಂಡು ಸಾಮಾಜಿಕ ಪ್ರಜ್ಞೆಯ ಅಗತ್ಯತೆಯನ್ನು ಗಮನಿಸಿ ಅಭಿವೃದ್ಧಿ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದು ವಾರ್ಷಿಕ ಸುಮಾರು ರೂ. 20 ಲಕ್ಷದಷ್ಟು ಶಿಕ್ಷಣ, ಆರೋಗ್ಯ, ಸಾಮಾಜಿಕ ಕಾರ್ಯಕ್ರಮಗಳಿಗೆ ತೊಡಗಿಸುತ್ತಿದೆ. ತನ್ನ ವಿಶಿಷ್ಟ ಕಾರ್ಯವೈಖರಿಯಿಂದ ಯಶಸ್ಸನ್ನು ಗಳಿಸಿ, ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಹಲವಾರು ಸಾಧನೆಯೊಂದಿಗೆ ಗುರುತಿಸಿಕೊಂಡು, ಕೇಂದ್ರ ಸರಕಾರದ ಸಹಕಾರ ಇಲಾಖೆ (ಎನ್.ಸಿ.ಡಿ.ಸಿ)ಯ ವತಿಯಿಂದ ಎರಡು ಬಾರಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದಿರುವ ಸಹಕಾರಿ ಸಂಸ್ಥೆ ಇದಾಗಿದೆ.

ಚೇತನಾ ಮೊಬೈಲ್ ಆ್ಯಪ್:
ಡಿಜಿಟಲೀಕರಣದ ಹೆಜ್ಜೆಯಾಗಿ ಅಭಿವೃದ್ಧಿಪಡಿಸಿದ “ಚೇತನಾ ಮೊಬೈಲ್ ಆ್ಯಪ್” ಮೂಲಕ ಗ್ರಾಹಕರು ತಾವಿರುವಲ್ಲಿಯೇ ತಮ್ಮ ಖಾತೆಯಿಂದ IMPS/NEFT/RTGS ಮೂಲಕ ಮೊಬಲಗು ವರ್ಗಾವಣೆ, RD ಹಾಗೂ ಸಾಲ ಖಾತೆಗಳಿಗೆ ಮೊಬಲಗು ವರ್ಗಾಯಿಸುವುದು, ಸಂಘದ ನೂತನ ಯೋಜನೆಯ ಕುರಿತಾದ ಮಾಹಿತಿಗಳನ್ನೂ ಪಡೆಯಬಹುದಾಗಿದ್ದು, ಸದ್ರಿ ಆ್ಯಪ್ ಬಗ್ಗೆ ಬಳಕೆದಾರರಿಂದ ಉತ್ತಮ ಸ್ಪಂದನೆ ದೊರೆತಿರುತ್ತದೆ. ಗೂಗಲ್ ಪ್ಲೇ- ಸ್ಟೋರ್‍ನಲ್ಲಿ ಲಭ್ಯವಿರುವ ಈ ಆ್ಯಪ್‍ನ ಪ್ರಯೋಜನ ಪಡೆಯುವ ಬಗ್ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಮೀಪದ ಶಾಖೆಗೆ ತೆರಳಿ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ.

ಸಂಘದ ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ವಿವಿಧ ರೀತಿಯ ಸೇವೆ ನೀಡುವ ಸಲುವಾಗಿ ಈಗಾಗಲೇ ಸೇಫ್ ಲಾಕರ್ ಸೌಲಭ್ಯ, ಇ- ಸ್ಟಾಂಪಿಂಗ್, ಪಾನ್ ಕಾರ್ಡ್, ಓಇಈಖಿ/ಖಖಿಉS ಸೇವಾ ಸೌಲಭ್ಯ, ಮನಿ ಟ್ರಾನ್ಸ್ಫರ್ ಸೌಲಭ್ಯ, ಲಂಬಾರ್ಡ್ ಆರೋಗ್ಯ ಕಾರ್ಡ್, ಮಣಿಪಾಲ ಆರೋಗ್ಯ ಕಾರ್ಡ್, ಆರೋಗ್ಯ ವಿಮೆ, ಸಾಮಾನ್ಯ ವಿಮೆ, “0” ಬ್ಯಾಲೆನ್ಸ್ ವಿದ್ಯಾನಿಧಿ ಖಾತೆ, ಮಿಸ್ಡ್‍ಕಾಲ್ ಸರ್ವಿಸ್, ಉಚಿತ ಎಸ್.ಎಂ.ಎಸ್ ಸೌಲಭ್ಯವನ್ನು ನೀಡಲಾಗುತ್ತಿದೆ.

ಸಾಮಾಜಿಕ ಕಳಕಳಿಯ ಧ್ಯೇಯದಡಿ ಉಡುಪಿ ಜಿಲ್ಲೆಯ ಸುಮಾರು 25 ಕನ್ನಡ ಮಾಧ್ಯಮ ಶಾಲೆಗಳಿಗೆ ಉಚಿತ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು 22 ಜೂನ್ 2024, ಶನಿವಾರ ಬೆಳಿಗ್ಗೆ 10.00 ಗಂಟೆಗೆ ಉಡುಪಿ ಟೌನ್ ಹಾಲ್‍ನಲ್ಲಿ ಜರಗಲಿದ್ದು, ಕಾರ್ಯಕ್ರಮವನ್ನು ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರು ಯಶ್‍ಪಾಲ್ ಸುವರ್ಣ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖಾ ಉಪನಿರ್ದೇಶಕರಾದ ಗಣಪತಿ ಕೆ, ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್.ವಿ ಉಪಸ್ಥಿತರಿರುವರು. ಸಂಘದ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿಯವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಎಂ.ಜಿ.ಎಂ ಕಾಲೇಜಿನ ನಿವೃತ್ತ ರಾಜಕೀಯ ಶಾಸ್ತ್ರ ಮುಖ್ಯಸ್ಥರಾದ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿಯವರಿಂದ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಣದ ಪಾತ್ರ ವಿಷಯದ ಕುರಿತು ವಿಶೇಷ ಉಪನ್ಯಾಸ ಇರಲಿರುವುದೆಂದು ಸಂಘದ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರಾದ ಜಾರ್ಜ್ ಸಾಮ್ಯುವೆಲ್ ಹಾಗೂ ಪ್ರಧಾನ ವ್ಯವಸ್ಥಾಪಕರಾದ ರಾಜೇಶ್ ವಿ. ಶೇರಿಗಾರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದರು.