ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವದ ವೈಭವದ ಮೆರವಣಿಗೆಯನ್ನು ಲಕ್ಷಾಂತರ ಮಂದಿ ಭಕ್ತರು ಕಣ್ತುಂಬಿಕೊಂಡರು.
ಕಾಪು ದಂಡಯಾತ್ರೆ ಮಧ್ಯರಾತ್ರಿ ಸ್ನಾನ ಮುಗಿಸಿದ ಯತಿಗಳು, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ ಜೋಡುಕಟ್ಟೆ ಆಗಮಿಸಿದರು. ನಗರದ ಜೋಡುಕಟ್ಟೆಯಿಂದ ನಸುಕಿನ ವೇಳೆ 2:30ರ ಸುಮಾರಿಗೆ ಮೆರವಣಿಗೆ ಆರಂಭಗೊಂಡಿತು. ಪುತ್ತಿಗೆ ಮಠದ ಪಟ್ಟದ ದೇವರು, ವಿದ್ವಾಂಸರು, ನಾಡಿನ ಗಣ್ಯರು ಹಾಗೂ ಸಹಸ್ರಾರು ಭಕ್ತಾದಿಗಳೊಂದಿಗೆ ಕೋರ್ಟ್ ರಸ್ತೆ, ಹಳೆ ಡಯಾನ ಸರ್ಕಲ್, ಐಡಿ ಯಲ್ ಸರ್ಕಲ್, ತೆಂಕಪೇಟೆ ಮಾರ್ಗದ ಮೂಲಕ ಸಾಗಿ ಮುಂಜಾನೆ 4:30ಕ್ಕೆ ಶ್ರೀಕೃಷ್ಣ ಮಠದ ರಥಬೀದಿ ತಲುಪಿತು. ಮುಂಜಾನೆ 5:30ರ ಸುಮಾರಿಗೆ ಮೆರವಣಿಗೆಯು ಮುಕ್ತಾಯಗೊಂಡಿತು.
ಮೆರವಣಿಗೆಯಲ್ಲಿ ಸಾಗಿದ ಜನಪದ ಕಲಾ ಪ್ರಕಾರಗಳು ಕಣ್ಮನ ಸೆಳೆದವು. ಸ್ತಬ್ಧಚಿತ್ರಗಳು, ಚೆಂಡೆಯ ನಾದ ಮೆರವಣಿಗೆಯ ಅಂದ ಹೆಚ್ಚಿಸಿದವು. ಜಗ್ಗಲಿಕೆ ವಾದ್ಯ, ಶ್ರೀಸಾಯಿ ಚೆಂಡೆ ಬಳಗ, ಪೂಜೆ ಕುಣಿತ, ಗೊರವರ ಕುಣಿತ, ಕೊಂಬು ಕಹಳೆ, ಪುಟಾಣಿಗಳಿಂದ ಮರಕಾಲು ಕುಣಿತ, ಕಂಗೀಲು ನೃತ್ಯ, ನಾಸಿಕ್ ಬ್ಯಾಂಡ್, ಗೊಂಬೆಯಾಟ, ಕೊಂಬೆ ಬಳಗ, ಹರೇ ರಾಮ ಹರೇ ಕೃಷ್ಣ, ಸಹಿತ ವಿವಿಧ ತಂಡಗಳು ಭಾಗಿಯಾಗಿದ್ದವರು ಅಯೋಧ್ಯೆಯ ರಾಮಮಂದಿರದ ಟ್ಯಾಬ್ಲೋ ಗಮನ ಸೆಳೆಯಿತು.
ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಅವರ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ವಾಹನದಲ್ಲಿರಿಸಿದ ಪಲ್ಲಕ್ಕಿಯಲ್ಲಿ ಕುಳಿತು ಸಾಗಿದರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಭಾಳ್ಕರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಶಾಸಕರಾದ ಯಶಪಾಲ್ ಸುವರ್ಣ ಸಹಿತ ಹಲವು ಗಣ್ಯರು ಶೋಭಾಯಾತ್ರೆಯಲ್ಲಿ ಭಾಗಿಯಾದರು.