ಉಡುಪಿ: ಉಡುಪಿಯ ಪಣಿಯಾಡಿ ಎಂಬಲ್ಲಿ ಅಪರೂಪದ ಕಾಡು ಬೆಕ್ಕು ಕಾಣಿಸಿಕೊಂಡಿದೆ. ಸ್ಥಳೀಯ ನಿವಾಸಿ ವೆಂಕಟಕೃಷ್ಣ ಲಕ್ಷ್ಮೀನಾರಾಯಣ ಉಪಾಧ್ಯಾಯ ಎಂಬವರ ಮನೆಗೆ ಅಪರೂಪದ ಅತಿಥಿ ಬಂದು ಅಚ್ಚರಿ ಮೂಡಿಸಿತು. ಅಂಗಳದಲ್ಲಿ ಓಡಾಡುತ್ತಿದ್ದ ಬೆಕ್ಕು ಮನೆಯ ಸುತ್ತಮುತ್ತ ಹೋಗಿ ಮೂಲೆ ಮೂಲೆಯಲ್ಲಿ ಆವಿತು ಕುಳಿತುಕೊಳ್ಳುತ್ತಿತ್ತು. ಈ ಮಾಹಿತಿಯನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ತಲುಪಿಸಲಾಯಿತು. ನಿತ್ಯಾನಂದ ಒಳಕಾಡು ಮತ್ತು ಅರಣ್ಯ ಇಲಾಖೆಯ ಗಸ್ತು ಪಾಲಕ ದೇವರಾಜ್ ಪಾಣ ಅವರು ಸ್ಥಳಕ್ಕೆ ಬಂದರು. ಬಾಕ್ಸ್ ಗೆ ಕಾಡುಬೆಕ್ಕನ್ನು ತುಂಬಿಸಲು ಒಳಕಾಡು ಮತ್ತು ಪಾಣ ಪರಿಶ್ರಮ ಪಡಬೇಕಾಯಿತು. ಕಾಡುಬೆಕ್ಕಿನ ತಲೆಯ ಭಾಗಕ್ಕೆ ಗಾಯವಾಗಿದ್ದು, ನಾಯಿ ಬೆಕ್ಕನ್ನ ಹಿಡಿಯಲು ಪ್ರಯತ್ನಪಟ್ಟಿರಬಹುದು ಎಂಬ ಶಂಕೆ ಇದೆ. ಗಾಯಗೊಂಡಿರುವ ಕಾಡು ಬೆಕ್ಕಿಗೆ ಪಶುವೈದ್ಯ ಡಾ. ಸಂದೀಪ್ ಅವರ ಬಳಿ ಚಿಕಿತ್ಸೆ ಕೊಡಿಸಲಾಗಿದೆ. ಸಂಪೂರ್ಣ ಚೇತರಿಸಿಕೊಂಡ ನಂತರ ಕಾಡುಬೆಕ್ಕನ್ನು ಮಣಿಪಾಲ ಟ್ರೀ ಪಾರ್ಕ್ ಬಿಡುವುದಾಗಿ ದೇವರಾಜ ಪಾಣ ತಿಳಿಸಿದ್ದಾರೆ.