ಉಡುಪಿ: ನಾಳೆ (ಫೆ.16) ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024 ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಹಾಗು ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಇಂದು (ಫೆ.16 ) ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ.

ಈ ಬಗ್ಗೆ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸುವರು. ವಿಧಾನಸಭಾ ಸ್ಪೀಕರ್ ಯುಟಿ ಖಾದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್.ಎಸ್.ತಂಗಡಗಿ, ಶಾಸಕ ಯಶ್ಪಾಲ್ ಸುವರ್ಣ, ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು.

ಕಾರ್ಯಕ್ರಮದಲ್ಲಿ ಹಿಮ್ಮೇಳ ವಾದಕ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದರಾದ ಕೊಳ್ತಿಗೆ ನಾರಾಯಣ ಗೌಡ, ಕೋಡಿ ವಿಶ್ವನಾಥ ಗಾಣಿಗ, ರಾಘವ ದಾಸ್, ಸುಬ್ರಾಯ ಹೊಳ್ಳ, ಮೂಡಲಪಾಯ ಯಕ್ಷಗಾನ ಕಲಾವಿದ ಕಾಂತರಾಜು ಹಾಗು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಯನ್ನು ಅಡ್ಕ ಗೋಪಾಲಕೃಷ್ಣ ಭಟ್‌, ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ, ಮವ್ವಾರು ಬಾಲಕೃಷ್ಣ ಮಣಿಯಾಣಿ, ಉಮೇಶ್‌ ಕುಪ್ಪೆಪದವು, ಶಿವಾನಂದ ಗೀಜಗಾರು, ಮುಗ್ವಾ ಗಣೇಶ್‌ ನಾಯ್ಕ, ಸುರೇಂದ್ರ ಮಲ್ಲಿ, ಅಂಡಾಲ ದೇವಿಪ್ರಸಾದ ಶೆಟ್ಟಿ, ಕೃಷ್ಣಪ್ಪ, ಹಳುವಳ್ಳಿ ಜ್ಯೋತಿ ಅವರಿಗೆ ಪ್ರದಾನ ಮಾಡಲಾಗುವುದು.

ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಯನ್ನು ಕರ್ಗಲ್ಲು ವಿಶ್ವೇಶ್ವರ ಭಟ್ಟ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.

ಸುದ್ದಿಗೋಷ್ಟಿಯಲ್ಲಿ ರಿಜಿಸ್ಟ್ರಾರ್ ನಮ್ರತಾ.ಎನ್, ಸದಸ್ಯ ಸಂಚಾಲಕರ್ ಪೃಥ್ವಿ ರಾಜೇಶ್ ಕುಮಾರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.