ಉಡುಪಿ: ಪೊಲೀಸರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ ನಟೋರಿಯಸ್ ಕ್ರಿಮಿನಲ್ ಮೇಲೆ ಫೈರಿಂಗ್ ನಡೆದಿದೆ. ಗರುಡ ಗ್ಯಾಂಗ್ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇಸಾಕ್ ಮೇಲೆ ಪೊಲೀಸರು ಗುಂಡಿನ ಸುರಿಮಳೆಗೈದಿದ್ದಾರೆ. ಬಳಿಕ ಬಂಧಿಸಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ದರೋಡೆ, ಸುಲಿಗೆ ಡ್ರಗ್ಸ್ ದಂಧೆಯಲ್ಲಿ ಕುಖ್ಯಾತಿ ಪಡೆದ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಮೇಲೆ ಉಡುಪಿಯ ಹಿರಿಯಡ್ಕದಲ್ಲಿ ಫೈರಿಂಗ್ ನಡೆದಿದೆ. ಇದೆ ಇಸಾಕ್ ಕಳೆದ 8 ದಿನಗಳ ಹಿಂದೆ ಮಣಿಪಾಲ ಹಾದಿ ಬೀದಿಯಲ್ಲಿ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಮಿಂಚಿನಂತೆ ಮಾಯವಾಗಿದ್ದ. ಇದೀಗ ಇದೆ ಇಸಾಕ್ ನ ಮಿಂಚಿನ ಓಟಕ್ಕೆ ಬ್ರೇಕ್ ಹಾಕಿದ ಮಣಿಪಾಲ ಪೊಲೀಸ್ ಇನ್ಸ್ಪೆಕ್ಟರ್ ದೇವರಾಜ್ ಅಂಡ್ ಟೀಂ ಇಸಾಕ್ ಕಾಲು ಮುರಿದು ಆಸ್ಪತ್ರೆಗೆ ಸೇರಿಸಿದ್ದಾರೆ.
ನಟೋರಿಯಸ್ ಕ್ರಿಮಿನಲ್ ಮೇಲೆ ಗುಂಡಿನ ಸುರಿಮಳೆಯನ್ನೇ ಗೈಯ್ದಿದ್ದಾರೆ. ಮೋಸ್ಟ್ ವಾಂಟೆಡ್ ಕ್ರಿಮಿನಲ್ ಪೊಲೀಸರ ಗುಂಡಿನ ವ್ಯೂಹಕ್ಕೆ ಸಿಲುಕಿ ವಿಲ ವಿಲ ಒದ್ದಾಡಿ ಆಸ್ಪತ್ರೆಯ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಸಾಕ್ ಅಂತಿಂಥಾ ಕ್ರಿಮಿನಲ್ ಅಲ್ಲ. ದರೋಡೆ, ವಸೂಲಿ, ಡ್ರಗ್ಸ್ ದಂಧೆಯಲ್ಲಿ ನಿಸ್ಸಿಮ. ಇಸಾಕ್ ವಿರುದ್ಧ ಬೆಂಗಳೂರಿನ ನೆಲಮಂಗಲ ಠಾಣೆಯಲ್ಲಿ ದರೋಡೆ ಪ್ರಕರಣವೊಂದು ದಾಖಲಾಗಿತ್ತು. ಕಳೆದ ಮಾರ್ಚ್ 4 ರಂದು ಮಣಿಪಾಲದಲ್ಲಿ ಇಸಾಕ್ ನನ್ನ ಬಂಧಿಸಲು ಬಂದಿದ್ದ ನೆಲಮಂಗಲ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ. ತಪ್ಪಿಸಿಕೊಳ್ಳೋ ಭರದಲ್ಲಿ ಅನೇಕ ವಾಹನಗಳಿಗೆ ತನ್ನ ಥಾರ್ ಜೀಪ್ ನಿಂದ ಗುದ್ದಿ ಪುಡಿ ಪುಡಿ ಗೈದಿದ್ದ. ಬಳಿಕ ಮಣಿಪಾಲದ ಮಣ್ಣಪಳ್ಳದ ಬಳಿ ಜೀಪ್ ನಿಂದ ಜಂಪ್ ಹೊಡೆದು ಎಸ್ಕೇಪ್ ಆಗಿದ್ದನು.
ಬರೋಬ್ಬರಿ 8 ದಿನಗಳ ಬಳಿಕ ಬುಧವಾರ ಇದೆ ಆರೋಪಿ ಸೇರಿದಂತೆ ನಾಲ್ಕು ಜನರನ್ನ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಣಿಪಾಲ ಪೊಲೀಸರು ದಸ್ತಗಿರಿ ಮಾಡಿದ್ರು. ಈ ಎಲ್ಲಾ ನಾಲ್ಕು ಆರೋಪಿಗಳನ್ನು ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಮಣಿಪಾಲಕ್ಕೆ ಕರೆತರುವಾಗ, ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಅಂಗಡಿ ಬಳಿ ಸಂಜೆ ಸುಮಾರು 7 ಗಂಟೆಗೆ ಆರೋಪಿ ಇಸಾಕನು ತನಗೆ ತುರ್ತಾಗಿ ವಾಂತಿ ಹಾಗೂ ಮೂತ್ರ ವಿಸರ್ಜನೆ ಮಾಡಲೇಬೇಕೆಂದು ಪೊಲೀಸರ ಬಳಿ ಹಠ ಮಾಡಿದ್ದಾನೆ. ವಾಹನವನ್ನು ನಿಲ್ಲಿಸಿದ ಪೊಲೀಸರು ಮೂತ್ರ ವಿಸರ್ಜನೆ ಅನುವು ಮಾಡಿದ್ದಾರೆ. ಆದರೆ ಈ ಬಳಿಕ ಏಕಾಏಕಿ ಇಸಾಕ್ ತನೊಂದಿಗೆ ಇದ್ದ ಉಡುಪಿ ಪೊಲೀಸ್ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಹೇಮಂತ್ ಹಾಗೂ ಹಿರಿಯಡ್ಕ ಎಸ್ಐ ಮಂಜುನಾಥ್ ಮೇಲೆ ಹಲ್ಲೆ ಮಾಡಿದ್ದಾನೆ.
ಪೊಲೀಸರನ್ನ ತಳ್ಳಿ ಅವರ ಮೇಲೆ ಆತನ ಕೈಗೆ ಅಳವಡಿಸಲಾಗಿದ್ದ ಲೀಡಿಂಗ್ ಚೈನ್ ಅನ್ನು ಬಳಸಿ ಬಲವಾಗಿ ಸುತ್ತಿ ದೂಡಿದ್ದಾನೆ, ನಂತರದಲ್ಲಿ ಇಬ್ಬರು ಪೊಲೀಸ್ ಉಪನಿರೀಕ್ಷಕರುಗಳು ಹಿಡಿಯಲು ಪ್ರಯತ್ನಿಸಿದಾಗ ಅವರಿಗೆ ಬಲವಾಗಿ ಒದ್ದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಹೀಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಆತನ ಲೀಡಿಂಗ್ ಚೈನ್ ಪೊಲೀಸ್ ವಾಹನದ ಎದುರಿನ ಗ್ಲಾಸಿಗೆ ಬಡಿದು, ಗ್ಲಾಸ್ ಒಡೆದು ಅಧಿಕಾರಿ ಹಾಗೆ ಸಿಬ್ಬಂದಿಗಳಿಗೆ ಗಾಯಗಳಾಗಿರುತ್ತದೆ.
ಈ ವೇಳೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದೇವರಾಜ್ ಅವರು ಇಸಾಕ್ ಗೆ ತಪ್ಪಿಸಿಕೊಳ್ಳದಂತೆ ವಾರ್ನ್ ಮಾಡಿದ್ದಾರೆ. ಇದನ್ನ ಕೇಳದೇ ಇದ್ದಾಗ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಆದರೂ ಕೂಡ ಇಸಾಕ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ಖಡಕ್ ಆಫೀಸರ್ ದೇವರಾಜ್ ಆರೋಪಿ ಇಸಾಕ್ ಎಡ ಕಾಲಿಗೆ ಐದು ಬಾರಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಸದ್ಯ ಗಾಯಗೊಂಡ ಆರೋಪಿ ಇಸಾಕ್ ಹಾಗೂ ಗಾಯಗೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












