ಉಡುಪಿ: ಅತ್ಯಂತ ಪ್ರಾಮಾಣಿಕ ಅಧಿಕಾರಿಯಾಗಿ ಯಾರ ಒತ್ತಡಕ್ಕೂ ಮಣಿಯದೆ ಕಾನೂನಿನ ಪ್ರಕಾರ ಪಕ್ಷಾತೀತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೆರ್ಡೂರು ಗ್ರಾಪಂನ ದಲಿತ ಸಮಾಜದ ಮಹಿಳಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮನ ಅವರ ಮೇಲೆ ದರ್ಪ ತೋರಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ವರ್ತನೆಗೆ ಪೆರ್ಡೂರು ಗ್ರಾಮ ಪಂಚಾಯತ್ ಸದಸ್ಯ, ಕಾಂಗ್ರೆಸ್ ಕಾಪು ಉತ್ತರ ಬ್ಲಾಕ್ ಅಧ್ಯಕ್ಷರಾದ ಸಂತೋಷ್ ಕುಲಾಲ್ ಪಕ್ಕಾಲು ಹಾಗೂ ಇತರ ಪಂಚಾಯತ್ ಸದಸ್ಯರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.
ಒಬ್ಬ ದಲಿತ ಮಹಿಳೆಯಾಗಿ ಹಲವು ಗ್ರಾಮ ಪಂಚಾಯಿತಿಗಳಲ್ಲಿ ದಕ್ಷ ಹಾಗೂ ನಿಷ್ಠುರತೆಯಿಂದ ಯಾರ ಒತ್ತಡಕ್ಕೂ ಮಣಿಯದೆ ಜನಸಾಮಾನ್ಯರ ಕೆಲಸಗಳನ್ನು ಮಾಡಿಕೊಡುತ್ತಿರುವ ಸುಮನ ಅವರು, ಪೆರ್ಡೂರು ಗ್ರಾಮ ಪಂಚಾಯಿತಿನಲ್ಲಿ ಕರ್ತವ್ಯಕ್ಕೆ ಹಾಜರಾದ ಮೇಲೆ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ದಬ್ಬಾಳಿಕೆಗೆ ಪರಿವಾಣ ಹಾಕುವಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ. ಇದನ್ನು ಸಹಿಸದ ಕೆಲವು ಮಂದಿ ಶಾಸಕರ ನಿಕಟವರ್ತಿಗಳು ಶಾಸಕರಿಗೆ ಸುಳ್ಳು ಅಭಿಪ್ರಾಯ ನೀಡಿದ್ದಾರೆ. ಆದರೆ ಶಾಸಕರು ಯಾವುದೇ ವಿಚಾರ ವಿನಿಮಯ ಮಾಡದೆ ಏಕಾಏಕಿಯಾಗಿ ದಲಿತ ಮಹಿಳಾ ಅಧಿಕಾರಿಯನ್ನು ಗದರಿಸಿ ತನ್ನ ದರ್ಪ ತೋರಿಸಿದ್ದಾರೆ.
ಇದು ಖಂಡನೀಯ. ದಲಿತ ಮಹಿಳಾ ಅಧಿಕಾರಿಯನ್ನು ಸಾರ್ವಜನಿಕರ ಎದುರೇ ನಿಂದಿಸುವ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿದ್ದಾರೆ.