ಉಡುಪಿ: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರು ಸೂಕ್ತ ತನಿಖೆ ನಡೆಸಿ: ರಮೇಶ್ ಕಾಂಚನ್ ಆಗ್ರಹ

ಉಡುಪಿ: ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆಗೆ ಬಳಸುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಪತ್ತೆಯಾಗಿರುವ ಕುರಿತು ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಸೂಕ್ತ ತನಿಖೆ ನಡೆಸಿ ದೇಶದ ಜನತೆಗೆ ಸತ್ಯ ತಿಳಿಸಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.

ದೇಶದಲ್ಲಿ ದೊಡ್ಡ ಮಟ್ಟದ ಕೋಲಾಹಲಕ್ಕೆ ಹಾಗೂ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆಯಾಗುವಂತ ವಿಚಾರ ಚರ್ಚೆಯಾಗುತ್ತಿದ್ದು ಕಳೆದ ಎರಡು ಅವಧಿಯಲ್ಲಿ ಎನ್.ಡಿ.ಎ ಮಿತ್ರಪಕ್ಷವಾಗಿರುವ ವೈ.ಎಸ್.ಆರ್ ಪಕ್ಷದಿಂದ ಮುಖ್ಯಮಂತ್ರಿಯಾಗಿದ್ದ ಜಗನ್ ಮೋಹನ್ ರೆಡ್ಡಿ ಸರಕಾರದ ಮೇಲೆ ಪ್ರಸ್ತುತ ಚಂದ್ರಬಾಬು ನಾಯ್ಡು ಗಂಭೀರ ಆರೋಪ ಮಾಡಿರುತ್ತಾರೆ. ದೇಶದ ಯಾವುದೇ ಭಾಗದಲ್ಲಿ ಏನೇ ಘಟನೆ ನಡೆದರೂ ಕೂಡ ಕೂಡಲೇ ಪ್ರತಿಕ್ರಿಯಿಸುವ ಪ್ರಧಾನಿಯವರು ತಿರುಪತಿ ಲಡ್ಡು ವಿಚಾರದಲ್ಲಿ ಮೌನ ತಾಳಿರುವುದು ಸಂಶಯಕ್ಕೆ ಕಾರಣವಾಗಿದೆ.

ಇಂತಹಾ ಗಂಭೀರ ವಿಷಯ ನಡೆದಿರುವಾಗ ಹಿಂದುತ್ವವನ್ನು ಗುತ್ತಿಗೆ ಪಡೆದುಕೊಂಡಂತೆ ವರ್ತಿಸುವ ಬಿಜೆಪಿ ಪಕ್ಷ ಹಾಗೂ ಹಿಂದೂ ಸಂಘಟನೆಗಳು ಯಾಕೆ ಈಗ ಮೌನವಾಗಿದ್ದಾರೆ. ಏನೇ ಘಟನೆಗಳು ನಡೆದರೂ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿರುಪತಿಯ ಲಡ್ಡು ವಿವಾದದ ಬಗ್ಗೆ ಯಾಕೆ ಮೌನ ಎನ್ನುವುದು ದೇಶದ ಜನರು ಕೇಳುತ್ತಿರುವ ಪ್ರಶ್ನೆಯಾಗಿದೆ.

ತಿರುಪತಿ ತಿಮ್ಮಪ್ಪನ ಪ್ರಸಾದ ಎಂದರೆ ಹಿಂದೂ ಧರ್ಮ ಸಹಿತ ಅನ್ಯ ಧರ್ಮದವರಿಗೂ ಕೂಡ ಅತ್ಯಂತ ಭಕ್ತಿ ಹಾಗೂ ಶ್ರದ್ಧೆ ಯಾಕೆಂದರೆ ತಿರುಪತಿಗೆ ಹೋಗುವುದು ಅಷ್ಟೊಂದು ಸುಲಭವಾದ ಮಾತಲ್ಲ. ದಿನಕ್ಕೆ ಲಕ್ಷಾಂತರ ಜನರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಳ್ಳುತ್ತಾರೆ. ಭಾರತದ ಅತ್ಯಂತ ಪ್ರಾಚೀನ ಕಾಲದ ದೇವಸ್ಥಾನಗಳಲ್ಲಿ ತಿರುಪತಿ ತಿಮ್ಮಪ್ಪನ ಸನ್ನಿಧಿಯು ಪ್ರಥಮ ಸ್ಥಾನದಲ್ಲಿದೆ. ತಿರುಪತಿ ತಿಮ್ಮಪ್ಪನ ಪ್ರಸಾದಕ್ಕೆ ಅದರದೇ ಆದ ಮಹತ್ವವಿದೆ. ಇಂತಹಾ ಪವಿತ್ರ ಕ್ಷೇತ್ರದ ಪ್ರಸಾದದ ವಿಷಯದಲ್ಲಿ ಇಂತಹ ಅಹಿತಕರ ಘಟನೆ ನಡೆದದ್ದು ಅತ್ಯಂತ ಆಘಾತಕಾರಿ ಸಂಗತಿ. ತಿರುಪತಿ ತಿಮ್ಮಪ್ಪನ ಬಗ್ಗೆ ಉಡುಪಿ ಹಾಗೂ ಮಂಗಳೂರು ಭಾಗದ ಜನರಿಗೆ ಅತ್ಯಂತ ಭಯ ಭಕ್ತಿ ಹಾಗೂ ಪ್ರೀತಿ. ಇಂತಹಾ ಸಮಯದಲ್ಲಿ ತನ್ನದೇ ಮಿತ್ರಪಕ್ಷವಾಗಿರುವ ವೈ.ಎಸ್.ಆರ್ ಪಕ್ಷದ ಜಗನ್ ಮೋಹನ್ ರೆಡ್ಡಿಯವರ ವಿರುದ್ದ ಮಾತನಾಡುವ ಧೈರ್ಯ ಮೋದಿಯವರಿಗೆ ಇಲ್ಲ ಎನ್ನುವುದು ಎದ್ದು ಕಾಣುತ್ತಿದೆ.

ಹಿಂದೂಗಳ ಬಗ್ಗೆ ತಾನೋಬ್ಬರೆ ಅತೀವ ಕಾಳಜಿ ಹೊಂದಿರುವ ವ್ಯಕ್ತಿ ಎಂಬಂತೆ ಪೋಸ್ ನೀಡುತ್ತಿರುವ ಮೋದಿಯವರು ಲಡ್ಡು ವಿವಾದವನ್ನು ಕೂಲಕುಂಷವಾಗಿ ತನಿಖೆ ನಡೆಸಬೇಕು. ಸಣ್ಣ ಸಣ್ಣ ವಿಚಾರಗಳಿಗೆ ಒಡೋಡಿ ಬರುವ ಕೇಂದ್ರದ ತನಿಖಾ ಸಂಸ್ಥೆಗಳಾದ ಸಿ.ಬಿ.ಐ ಇ.ಡಿ ಇವುಗಳ ಮೂಲಕವೇ ತನಿಖೆ ನಡೆಸಿ ದೇಶದ ಜನತೆಗೆ ನ್ಯಾಯ ಒದಗಿಸುವ ಕೆಲಸ ಮೋದಿಯರು ಮಾಡಲಿ ಅದನ್ನು ಬಿಟ್ಟು ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿತು ಅನ್ನೋ ಹಾಗೆ ತಮ್ಮದೇ ಮಿತ್ರಪಕ್ಷದ ಸರಕಾರ ಅಧಿಕಾರದಲ್ಲಿದ್ದು ಈಗ ಪ್ರಕರಣಕ್ಕೆ ಕಾಂಗ್ರೆಸ್ ಪಕ್ಷದ ಹೆಸರನ್ನು ಸೇರಿಸಲು ಹೊರಟಿರುವ ಬಿಜೆಪಿ ಮೊದಲು ಸೂಕ್ತ ತನಿಖೆ ನಡೆಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.