ಉಡುಪಿ: ತಲವಾರಿನಿಂದ ಯುವಕನ ಕೊಲೆ ಯತ್ನ ಪ್ರಕರಣ: ಚಾರ್ಜ್ ಶೀಟ್ ತಯಾರಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ – ಎಸ್‌ಪಿ ಡಾ. ಅರುಣ್ ಕೆ

ಉಡುಪಿ: ಉಡುಪಿ ಪುತ್ತೂರಿನಲ್ಲಿ ಸೆಲೂನ್ ಯುವಕನ ಮೇಲೆ ಗ್ಯಾಂಗ್ ವೊಂದು ಕೊಲೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಷ್ಟು ಬೇಗನೆ ಚಾರ್ಜ್ ಶೀಟ್ ಮಾಡಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಡುಪಿ ಎಸ್‌ಪಿ ಡಾ. ಅರುಣ್ ಕೆ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಚರಣ್ ಅವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಜೂನ್ 16ರಂದು ದೂರು ನೀಡಿದ್ದಾರೆ. ಈ ದೂರಿನಲ್ಲಿ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ತಮ್ಮ ಅವರ ಪರಿಚಯದ ಸ್ನೇಹಿತರು ತಲವಾರಿನಿಂದ ದಾಳಿ ಮಾಡಲು ಬಂದಿದ್ದಾರೆ. ಬಳಿಕ ತಾನು ಸ್ನೇಹಿತರೊಂದಿಗೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿಹೋಗಿದ್ದೇನೆ. ಈ ವೇಳೆ ದಾಳಿ ಮಾಡಲು ಬಂದವರು ತನ್ನ ಗಾಡಿಯನ್ನು ಜಖಂ ಮಾಡಿದ್ದಾರೆಂದು ಅವರು ಎಂದು ತಿಳಿಸಿದ್ದಾರೆ ಎಂದರು.

ಈ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಈಗಾಗಲೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಪ್ರವೀಣ್, ಅಭಿಷೇಕ್ ಮತ್ತು ದೇಶ್ ರಾಜ್ ಅವರನ್ನು ಬಂಧಿಸಲಾಗಿದೆ. ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಿಚಾರಣೆ ನಡೆಸಿ ಕಾನೂನಿನಂತೆ ಕ್ರಮ ಜರುಗಿಸಲಾಗಿದೆ ಎಂದು ಮಾಹಿತಿ ನೀಡಿದರು.