ಉಡುಪಿ: ತಬ್ಬಲಿ ಗಂಡು ಕರುವಿಗೆ ನಾಮಕರಣ, ತೊಟ್ಟಿಲು‌ ಶಾಸ್ತ್ರ.!

ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಮಣಿಪಾಲ ಶಾಂತಿನಗರದಲ್ಲಿರುವ‌ “ನಿಮ್ಮ ಮನೆ” ಅಂಗಳದಲ್ಲಿ ತಬ್ಬಲಿ ಗಂಡು ಕರುವಿಗೆ ನಾಮಕರಣ- ತೊಟ್ಟಿಲು ಶಾಸ್ತ್ರವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಸಿ, ಗೋಪ್ರೇಮವನ್ನು ಮೆರೆಯಲಾಯಿತು.

ಶಿವರಾತ್ರಿಯ ದಿನ, ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಟೈಗರ್ ಸರ್ಕಲಿನಲ್ಲಿ ಕರು ಜನಿಸಿರುವುದರಿಂದ, ಕರುವಿಗೆ “ಟೈಗರ್ ಶಿವ” ನಾಮಕರಣ ಮಾಡಲಾಯಿತು. ಶಾಂತಿನಗರ ಗಣೇಶೋತ್ಸವ ಸಭಾಭವನದಿಂದ ತೊಟ್ಟಿಲು‌ ಶಾಸ್ತ್ರ ನಡೆಯುವ ಮಂಟಪದವರೆಗೆ‌ ಹೊಸಬಟ್ಟೆ‌,‌ ಹೂವುಗಳಿಂದ ಸಿಂಗರಿಸಿದ ಕರುವನ್ನು ಮೆರವಣಿಗೆ ಮೂಲಕ ಕರೆತರಲಾಗಿತ್ತು. ಮೆರವಣಿಗೆಯಲ್ಲಿ ಸೀತಾರಾಮ ಮಹಿಳಾ ಭಜನಾ ಮಂಡಳಿ ಉಡುಪಿ ಹಾಗೂ‌ ಮಂಚಿ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯ‌ ಭಜಕರು ಭಜನೆಗಳನ್ನು ಸುಶ್ರಾವ್ಯವಾಗಿ ಭಜಿಸಿ ಮೆರವಣಿಗೆಗೆ‌ ಮೆರಗು‌ ನೀಡಿದರು. ಹಾಗೆಯೇ‌ ತೊಟ್ಟಿಲು ಶಾಸ್ತ್ರದ ವಿಧಿವಿಧಾನಗಳನ್ನು ನೇರವರಿಸಿದರು.

ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶುವೈದ್ಯರಾದ ಡಾ. ಸಂದೀಪ್ ಶೆಟ್ಟಿ ಉದ್ಯಾವರ, ಡಾ. ಪ್ರಶಾಂತ ಶೆಟ್ಟಿ ಮಣಿಪಾಲ, ಸಾಹಿತಿ ಹರಿಕೃಷ್ಣ ರಾವ್ ಸಗ್ರಿ, ನಿರ್ಮಲ ಹರಿಕೃಷ್ಣ ರಾವ್,‌ಶಾಮಿಯಾನದ ವ್ಯವಸ್ಥೆ ಅಧ್ಯಕ್ಷರು ನಾಗರಾಜ ಶೆಟ್ಟಿ ಶರಣ್ಯಎನ್ಕೆವ್ ಶಾಂತಿನಗರ, ಉದ್ಯಮಿ ಉದಯ ಕುಮಾರ್, ಧರ್ಮಸ್ಥಳ ಭಜನಾ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷ ವಿಜಯ‌ ಶೆಟ್ಟಿ ಕೊಂಡಾಡಿ, ಹೊಸಬದುಕು ಆಶ್ರಮದ ಸಂಚಾಲಕ ವಿನಯಚಂದ್ರ ಸಾಸ್ತಾನ, ರಾಜಶ್ರೀ, ನಾಗರೀಕ ಸಮಿತಿಯ ಸಹಸಂಚಾಲಕರಾದ ತಾರಾನಾಥ್ ಮೇಸ್ತ ಶಿರೂರು, ಕೆ. ಬಾಲಗಂಗಾಧರ ರಾವ್, ಸದಸ್ಯರಾದ ಸತೀಶ್ ಕುಮಾರ್, ಮತ್ತಿತರರು ಭಾಗಿಯಾಗಿದ್ದರು.‌ ಜಾಹಿಂಗಿರ್‌ ಭಟ್ಟರ ಉಡುಪಿ ಸ್ವಿಟ್ಸ್ ಹೌಸ್ ಕಲ್ಸಂಕ ಉಚಿತ‌ ಉಪಹಾರ ಮತ್ತು ಹೂವಿನಲಂಕಾರಕ್ಕೆ ಫ್ಲವರ್ ವಿಷ್ಣು ಹೂವು ಒದಗಿಸಿದರು.‌ ಶೋಭ ಕುಮಾರ್ ಶೆಟ್ಟಿ ಸ್ವಾತಂತ್ರ್ಯ ಪೂರ್ವ 1945 ರ ಇಸವಿಯ ಹಿತ್ತಾಳೆಯ ತೊಟ್ಟಿಲನ್ನು ಒದಗಿಸಿದರು.

ಟೈಗರ್ ಶಿವ ಶುಭ ನಾಮಧೇಯ ಪಡೆದುಕೊಂಡು, ತೊಟ್ಟಿಲಿನಲ್ಲಿ ತೂಗಿಸಿಕೊಂಡು, ಜೋ ಜೋ ಲಾಲಿ ಹಾಡು ಹಾಡಿಸಿಕೊಂಡಿರುವ ಮುದ್ದಾದ ಕರುವಿನ ಜನ್ಮವೃತ್ತಾಂತವು ಬ‌ಹಳ ರೋಚಕವಾಗಿದೆ. ಈ ಕರುವಿನ ಹೆತ್ತಬ್ಬೆಯು ಬೀಡಾಡಿ ದನವಾಗಿತ್ತು. ತುಂಬು ಗರ್ಭಿಣಿಯಾಗಿದ್ದ ದನವು ಮಣಿಪಾಲ ಹೃದಯ ಭಾಗದಲ್ಲಿರುವ ಟೈಗರ್ ಸರ್ಕಲಿನಲ್ಲಿ ಶಿವರಾತ್ರಿಯ ಶುಭದಿನದಂದು ಗಂಡು ಕರುವಿಗೆ ಜನ್ಮನೀಡಿತ್ತು. ಕರುವಿನ ಮೇಲೆ ಮಾತೃಪ್ರೇಮವನ್ನು ಹರಿಸಿ, ಹಾಲುಣಿಸ ಬೇಕಾಗಿದ್ದ ದನವು ಸ್ಥಳದಿಂದ ಪಲಾಯನ ಮಾಡಿತು. ಜನಿಸಿದ ಹತ್ತೇ ನಿಮಿಷದಲ್ಲಿ ಕರು ಅನಾಥವಾಯಿತು. ಕರುವಿನ ಪ್ರಾಣಕ್ಕೂ ಸಂಚಕಾರ ಎದುರಾಯಿತು. ಒಂದೆಡೆ ಬೀದಿ ನಾಯಿಗಳಿಗೆ ಆಹಾರವಾಗುವ ಭೀತಿ, ಇನ್ನೊಂದಡೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವೆ ಸಾಲಿನಂತೆ ಸಂಚರಿಸುವ ಘನ ಲಘು ವಾಹನಗಳ ಚಕ್ರದಡಿ ಸಿಲುಕುವ ಭಯವು ಎದುರಾಯಿತು.

ಇಂತಹ‌ ಇಕ್ಕಟ್ಟಿನ ಸಂದರ್ಭದಲ್ಲಿ ಆಪದ್ಭಾಂದವರಾಗಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ‌ ಒಳಕಾಡುವರು ಅಲ್ಲಿಗೆ ಪ್ರತ್ಯಕ್ಷರಾದರು. ಕರುವಿನ ತಾಯಿಗೆ ಹುಡುಕಾಟ ನಡೆಸಿದರು. ತಾಯಿ ಪತ್ತೆಯಾಗಲಿಲ್ಲ. ಒಳಕಾಡುವರು ತಬ್ಬಲಿ ಕರುವನ್ನು ಮನೆಗೆ ಕಂಡ್ಯೊಯ್ದು, ಪಶುವೈದ್ಯರ ಸಲಹೆ ಪಡೆದು, ಬಾಟಲಿ ಮೂಲಕ ಹಾಲುಣಿಸಿದರು. ಬಳಿಕ ಉಡುಪಿ ಕೊರ್ಟ್ ರಸ್ತೆಯಲ್ಲಿರುವ ಹೊಸಬದುಕು ಆಶ್ರಮದಲ್ಲಿ ಪೋಷಣೆಗೆ ವ್ಯವಸ್ಥೆಗೊಳಿಸಿದ್ದರು.