ಉಡುಪಿ: ಉಡುಪಿ ಆಟಿಸಂ ಸೊಸೈಟಿಯ ಆಶ್ರಯದಲ್ಲಿ ‘ಕಲಾಸೌರಭ-3’ ಕಾರ್ಯಕ್ರಮವನ್ನು ಇದೇ ಡಿ. 14ರಂದು ಬೆಳಿಗ್ಗೆ 9ರಿಂದ 4.30ರವರೆಗೆ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ನಡೆಯಲಿದೆ ಎಂದು ಆಟಿಸಂ ಸೊಸೈಟಿಯ ಅಧ್ಯಕ್ಷೆ ಅಮಿತಾ ಪೈ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿಯಲ್ಲಿ ಸುಧಾರಿತ ಆಟಿಸಂ ಆರೈಕೆ ಕೇಂದ್ರವನ್ನು ಮುಂದಿನ ದಿನಗಳಲ್ಲಿ ಸ್ಥಾಪಿಸಿ, ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಉತ್ತಮ ಗುಣಮಟ್ಟದ ಆರೈಕೆಯನ್ನು ಆಟಿಸಂ ಇರುವ ಮಕ್ಕಳಿಗೆ ನೀಡುವುದು ನಮ್ಮ ಉದ್ದೇಶವಾಗಿದೆ.
16 ವಿಶೇಷ ಶಾಲೆಗಳಿಂದ 350ಕ್ಕೂ ಹೆಚ್ಚಿನ ಮಕ್ಕಳು ಮತ್ತು ಅವರ ಪೋಷಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮ ಬೆಳಿಗ್ಗೆ 9ಗಂಟೆಗೆ ನಡೆಯಲಿದ್ದು, ಜಿಲ್ಲಾಧಿಕಾರಿ ಡಿ. ವಿದ್ಯಾಕುಮಾರಿ, ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ ಭಂಡಾರಿ, ಐ.ಎಮ್.ಎ-ಉಡುಪಿ ಕರಾವಳಿ ಅಧ್ಯಕ್ಷ ಡಾ. ಸುರೇಶ್ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಆಟಿಸಂ ಸೊಸೈಟಿ ಆಫ್ ಉಡುಪಿ ಅಧ್ಯಕ್ಷೆ ಡಾ. ಅಮಿತಾ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರೋಪ ಸಮಾರಂಭವು ಸಂಜೆ 3.30ಕ್ಕೆ ನಡೆಯಲಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ ಗಡಾಡ್ ಹಾಗೂ ಪ್ರಸಿದ್ಧ ಹಾಸ್ಯ ಕಲಾವಿದ ಮನು ಹಂದಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟನಾ ಕಾರ್ಯದರ್ಶಿ ಕೀರ್ತೇಶ್ ಎಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮನೋವೈದ್ಯ ಡಾ. ಪಿ.ವಿ.ಭಂಡಾರಿ, ಆಟಿಸಂ ಸೊಸೈಟಿಯ ಕೋಶಾಧಿಕಾರಿ ಅನುಷಾ ಹೆಗ್ಡೆ ಇದ್ದರು.