ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಈದ್ ಮಿಲಾದ್ ಆಚರಣೆ

ಉಡುಪಿ: ಪ್ರವಾದಿ ಮುಹಮ್ಮದ್ ಪೈಗಂಬರ್‌ರವರ ಜನ್ಮ ದಿನಾಚರಣೆ ಮಿಲಾದುನ್ನಬಿಯನ್ನು ಸೋಮವಾರ ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಕಾಪು, ಉಚ್ಚಿಲ, ಮೂಳೂರು, ಪಡುಬಿದ್ರೆ, ಕಾರ್ಕಳ, ಶಿರ್ವ, ಕಟಪಾಡಿ, ನೇಜಾರು, ದೊಡ್ಡಣಗುಡ್ಡೆ, ಕುಂದಾಪುರ ಕೋಡಿ ಸೇರಿದಂತೆ ಹಲವು ಕಡೆಗಳಲ್ಲಿ ಈದ್ ಮಿಲಾದ್ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು.

Oplus_0
Oplus_0

ಆಯಾ ಮಸೀದಿಗಳಿಂದ ಹೊರಟ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾಗಿ ವಾಪಾಸ್ಸು ಮಸೀದಿಗಳಿಗೆ ಆಗಮಿಸುವ ಮೂಲಕ ಸಮಾಪ್ತಿಗೊಂಡಿತು. ಮೆರವಣಿಗೆಯಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ ಸಂದೇಶ ಸಾರುವ ಹಾಡು ಗಳು, ದಫ್ ಕುಣಿತ, ಸ್ಕೌಟ್ ವಿದ್ಯಾರ್ಥಿಗಳು ಹಾಗೂ ಮದ್ರಸದ ಮಕ್ಕಳು ಗಮನ ಸೆಳೆದರು. ಮೆರವಣಿಗೆಯಲ್ಲಿ ಸಾಗಿ ಬಂದವರಿಗೆ ಸಿಹಿತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸಲಾಯಿತು. ಕೆಲವು ಕಡೆಗಳಲ್ಲಿ ಹಿಂದು ಬಾಂಧವರು ಕೂಡ ಕೈಜೋಡಿಸಿ ಸೌಹಾರ್ದತೆಯ ಸಂದೇಶ ಸಾರಿದರು.

ಕಾಪು ಪೊಲಿಪು ಜುಮಾ ಮಸೀದಿಯಿಂದ ಹೊರಟ ಮೆರವಣಿಗೆಯು ಕೊಪ್ಪಲಂಗಡಿಯವರೆಗೆ ಸಾಗಿ ಬಂತು. ಅಲ್ಲಿ ಕೊಪ್ಪಲಂಗಡಿ ನೂರುಲ್ ಹುದಾ ಮದ್ರಸ, ಕೊಂಬಗುಡ್ಡೆ ಗೌಸಿಯಾ ಜುಮಾ ಮಸೀದಿ, ಮಜೂರು, ಪಕೀರ್ಣಕಟ್ಟೆ ಜುಮಾ ಮಸೀದಿಗಳ ಜೊತೆ ಸೇರಿ ಪೊಲಿಪು ಮಸೀದಿಯಲ್ಲಿ ಸಮಾಪ್ತಿಗೊಂಡಿತು. ಈ ಸಂದರ್ಭದಲ್ಲಿ ಕಾಪು ಖಾಝಿ ಪಿ.ಬಿ.ಅಹ್ಮದ್ ಮುಸ್ಲಿಯಾರ್ ಹಾಜರಿದ್ದರು. ಮೆರವಣಿಗೆಯಲ್ಲಿ ಆಲಂಕೃತ ವಾಹನಗಳಲ್ಲಿ ದಫ್ ಕುಣಿತ, ಮದ್ರಸ ಮಕ್ಕಳು ಗಮನ ಸೆಳೆದರು.

ಅದೇ ರೀತಿ ಉಡುಪಿ ನಗರದ ದೊಡ್ಡಣಗುಡ್ಡೆ ಜುಮಾ ಮಸೀದಿಯಿಂದ ಹೊರಟ ಮೆರವಣಿಗೆಯು ಬುರಗಿ ಸ್ಟೋರ್ ತಲುಪಿ, ಬಳಿಕ ವಾಪಾಸ್ಸು ಮಸೀದಿಗೆ ಆಗಮಿಸಿತು. ಕುಂದಾಪುರ ಕೋಡಿಯಲ್ಲಿ ನಡೆದ ಮೆರವಣಿಗೆಯಲ್ಲಿ ಸಮವಸ್ತ್ರಧಾರಿ ವಿದ್ಯಾರ್ಥಿಗಳು ಗಮನ ಸೆಳೆದರು. ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು. ಕಾರ್ಕಳ, ಕುಂದಾಪುರ ಹಾಗೂ ಉಡುಪಿ ಡಿವೈಎಸ್ಪಿಗಳು ಭದ್ರತೆಯ ನೇತೃತ್ವ ವಹಿಸಿದ್ದರು