ಉಡುಪಿ: ಚಿನ್ನದ ಅಂಗಡಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನ ಕಳವು: ಪ್ರಕರಣ ದಾಖಲು

ಉಡುಪಿ: ನಗರದ ಚಿನ್ನದ ಅಂಗಡಿಯಲ್ಲಿ ಕೆಲಸಕ್ಕೆ ಇದ್ದ ವ್ಯಕ್ತಿಯೊರ್ವ ಲಕ್ಷಾಂತರ ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ಉಡುಪಿಯ ಚಿತ್ತರಂಜನ್ ಸರ್ಕಲ್ ಬಳಿಯ ಜುವೆಲ್ ಪ್ಲಾಜಾ ಕಟ್ಟಡದಲ್ಲಿ ಸೆ.20ರಂದು ಸಂಜೆ ವೇಳೆ ನಡೆದಿದೆ.

ಸಬೀರ್ ಅಲಿ ಮಲ್ಲಿಕ್ ಎಂಬವರ ಚಿನ್ನದ ಅಂಗಡಿಯಲ್ಲಿ ಕೆಲಸಕ್ಕೆ ಇದ್ದ ಪಶ್ಚಿಮ ಬಂಗಾಳ ಮೂಲದ ಸೋಮೇನ್ ಡೋಲುಯಿ ಎಂಬಾತನಿಗೆ ಜುಮ್ಕಿಯ ಕೆಳಗೆ ಗುಂಡು ಅಳವಡಿಸಲು ಚಿನ್ನದ ಗಟ್ಟಿ ನೀಡಿ, ಸಬೀರ್ ಊಟ ಮಾಡಲು ಮನೆಗೆ ತೆರಳಿದ್ದರು. ಸಂಜೆ ವೇಳೆ ಸಬೀರ್, ಸೋಮೇನ್ ಡೋಲುಯಿಗೆ ಚಿನ್ನದ ಕೆಲಸದ ಬಗ್ಗೆ ವಿಚಾರಿಸಲು ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು.

ಕೂಡಲೇ ಅಂಗಡಿಗೆ ಬಂದು ನೋಡಿದಾಗ ಸೋಮೇನ್ ಡೋಲುಯಿ ಚಿನ್ನದ ಕುಸುರಿ ಕೆಲಸಕ್ಕೆ ನೀಡಿದ್ದ 136.240 ಗ್ರಾಂ ತೂಕದ ಚಿನ್ನವನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.