ಉಡುಪಿ: ಚಲಿಸುತ್ತಿದ್ದ ಬಸ್ಸಿನಲ್ಲೇ ವಿದ್ಯಾರ್ಥಿನಿ ಅಸ್ವಸ್ಥ; ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ ಚಾಲಕ‌

ಉಡುಪಿ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ದಿಢೀರ್ ಅಸ್ವಸ್ಥಗೊಂಡ ಪರಿಣಾಮ ಖಾಸಗಿ ಬಸ್ ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದ ಮತ್ತೊಂದು ಘಟನೆ ಗುರುವಾರ ಬೆಳಗ್ಗೆ ಉಡುಪಿಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ಮಂಗಳೂರಿನಿಂದ ಮಣಿಪಾಲಕ್ಕೆ ಹೊರಟಿದ್ದ ಎಕೆಎಂ ಎಸ್ ಬಸ್ಸಿಗೆ ಮೂಲ್ಕಿಯಲ್ಲಿ ವಿದ್ಯಾರ್ಥಿನಿ ಯೊಬ್ಬಳು ಉಡುಪಿಗೆ ತೆರಳಲು ಹತ್ತಿದ್ದಾಳೆ. ಆದರೆ ಕಟಪಾಡಿ ದಾಟಿ ಉದ್ಯಾವರ ಸಮೀಪಿಸುತ್ತಿದ್ದಂತೆ ಬಸ್ಸಿನಲ್ಲಿದ್ದ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದಳು. ಬಸ್ಸಿನ ಚಾಲಕ ನಸೀಫ್ ಹಾಗೂ ನಿರ್ವಾಹಕ ಮೋಹಿತ್ ಕೂಡಲೇ ಬಸ್ಸನ್ನು ಉಡುಪಿಯ ಟಿ.ಎಂ.ಎ . ಪೈ ಆಸ್ಪತ್ರೆಗೆ ಕೊಂಡೊಯ್ದ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.

ವಿದ್ಯಾರ್ಥಿನಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ನೇರವಾದ ಎಕೆಎಂ ಎಸ್ ಚಾಲಕ ಹಾಗೂ ನಿರ್ವಾಹಕರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.