ಉಡುಪಿ: ಕ್ರಿಸ್ಮಸ್ ಆಚರಣೆಗೆ ಸಜ್ಜುಗೊಂಡ ಚರ್ಚ್ ಗಳು; ಇಂದು ರಾತ್ರಿ ಹಬ್ಬದ ಸಂಭ್ರಮ

ಉಡುಪಿ: ಕರಾವಳಿಯಲ್ಲಿ ಕ್ರಿಸ್ಮಸ್ ಹಬ್ಬದ ಕೊನೇ ಹಂತದ ಸಿದ್ಧತೆಗಳು ನಡೆಯುತ್ತಿವೆ. ಡಿಸೆಂಬರ್ 24ರ ಮಧ್ಯರಾತ್ರಿಯ ವೇಳೆ ಕ್ರಿಸ್ತರು ಜನಿಸಿದ ಘಳಿಗೆಯನ್ನು ಸ್ಮರಿಸಿ ಕ್ರೈಸ್ತ ಸಮುದಾಯ ಕ್ರಿಸ್ಮಸ್ ಸಂಭ್ರಮಾಚರಣೆ ನಡೆಸಲಿದೆ.

ಮಂಗಳವಾರ ರಾತ್ರಿ ಎಲ್ಲ ಚರ್ಚ್ ಗಳಲ್ಲಿ ಕ್ರಿಸ್ಮಸ್ ಹಬ್ಬದ ಜಾಗರಣೆ ಆಚರಿಸಿ ಕ್ರಿಸ್ತ ಜಯಂತಿಯ ವಿಶೇಷ ಬಲಿಪೂಜೆಗಳನ್ನು ಸಲ್ಲಿಸುತ್ತಾರೆ. ಕ್ಯಾರೊಲ್ ಗಾಯನದೊಂದಿಗೆ ಸಂಭ್ರಮಾಚರಣೆ ಆರಂಭವಾಗುತ್ತದೆ.

ನಗರದ ಎಲ್ಲ ಚರ್ಚ್‌ಗಳಲ್ಲಿ ಮಂಗಳವಾರ ಸಂಜೆ 7 ಗಂಟೆಯಿಂದ ಹಬ್ಬದ ಮೆರುಗು ಶುರುವಾಗುತ್ತದೆ. ಕ್ಯಾರೊಲ್‌ಗಳ ಗಾಯನದ ಬಳಿಕ ಧರ್ಮಗುರುಗಳ ನೇತೃತ್ವದಲ್ಲಿ ಬಲಿಪೂಜೆಗಳು ನಡೆಯುತ್ತವೆ.

ಬಲಿಪೂಜೆಯ ಅಂತ್ಯದಲ್ಲಿ ಮೊಂಬತ್ತಿ ವಿತರಿಸುತ್ತಾರೆ. ಬಳಿಕ ಪರಸ್ಪರ ಶುಭಾಶಯ ವಿನಿಮಯದೊಂದಿಗೆ ಮನೋರಂಜನೆ ಕಾರ್ಯಕ್ರಮಗಳು ನಡೆಯುತ್ತವೆ.

ಕ್ರಿಸ್ಮಸ್ ಗೋದಲಿ, ನಕ್ಷತ್ರಗಳ ಸಾಲು ಎಲ್ಲೆಡೆ ರಾರಾಜಿಸುತ್ತಿವೆ. ವಿಶೇಷ ತಿನಿಸುಗಳಾದ ಕೇಕ್ ಕುಸ್ವಾರ್‌ಗಳಿಗೆ ವಿಪರೀತ ಬೇಡಿಕೆ ಇದೆ. ಕ್ರಿಸ್ಮಸ್ ತಿಂಡಿಗಳನ್ನು ಚರ್ಚ್ ವ್ಯಾಪ್ತಿಯಲ್ಲೇ ವಿವಿಧ ಸಂಘ ಸಂಸ್ಥೆಗಳು ಜತೆಯಾಗಿ ತಯಾರಿಸಿ ಅಗತ್ಯ ಇದ್ದವರಿಗೆ ನೀಡುವ ಕಾರ್ಯವನ್ನು ಕೈಗೊಂಡಿದ್ದಾರೆ. ಮನೆಗಳ ಮುಂಭಾಗದಲ್ಲಿ ಗೋದಲಿಗಳು ನಿರ್ಮಿಸಲಾಗಿದ್ದು, ಮನೆಯಂಗಳದಲ್ಲಿ ನಕ್ಷತ್ರಗಳು ಮಿನುಗುತ್ತಿವೆ.

ಗೋದಲಿ (ಕ್ರಿಬ್ ಸೆಟ್), ಮನೆ, ಮನೆಯ ಆವರಣ, ಚರ್ಚ್‌ಗಳನ್ನು ಅಲಂಕರಿಸುವ ನಕ್ಷತ್ರಗಳು, ಘಂಟೆ (ಬೆಲ್)ಗಳ ಸಾಲು, ಕ್ರಿಸ್ಮಸ್ ಟೀ, ಸಾಂತಕ್ಲಾಸ್ ವೇಷಭೂಷಣ ಮಾರಾಟ ಜೋರಾಗಿದೆ. ಕ್ರಿಸ್ಮಸ್ ಹಬ್ಬದ ಮುಂಚಿತವಾಗಿ ವಿವಿಧ ಚರ್ಚ್‌ಗಳನ್ನು ವಿದ್ಯುತ್ ದೀಪಾಲಂಕಾರಗೊಳಿಸಲಾಗಿದೆ. ಒಟ್ಟಾರೆ ಕ್ರಿಸ್ಮಸ್ ಹಬ್ಬ ಕಳೆಗಟ್ಟಿದ್ದು, ಕ್ರೈಸ್ತರು ಸಂಭ್ರಮಾಚರಣೆಯಲ್ಲಿದ್ದಾರೆ.