ಉಡುಪಿ: ಕೃಷ್ಣನೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಗರಿಗೆದರಿದೆ. ಶ್ರೀ ಕೃಷ್ಣಮಠದಲ್ಲಿ ಕಣ್ಮನ ಸೆಳೆಯುವ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಕೃಷ್ಣಾಷ್ಟಮಿ ಆಚರಣೆ ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಸಕಲ ಸಿದ್ಧತಾ ಕಾರ್ಯ ವಿಜೃಂಭಣೆಯಿಂದ ನಡೆಯುತ್ತಿದೆ.
ಇಂದು (ಆ.26) ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆಗಳು, ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜೆ, ರಾತ್ರಿ ಅರ್ಘ್ಯಪ್ರದಾನ ನೆರವೇರಲಿದೆ. ಹಾಗೂ ರಥಬೀದಿಯಲ್ಲಿ ಆ. 27ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದೆ.
ಕೃಷ್ಣ ಪ್ರಸಾದಕ್ಕೆ ಅಗತ್ಯ ಇರುವ ಉಂಡೆ, ಚಕ್ಕುಲಿ ತಯಾರಿಸಲಾಗಿದೆ. ನಗರದಾದ್ಯಂತ ಹುಲಿವೇಷ, ವಿವಿಧ ವೇಷಗಳ ರಂಗು ಕಣ್ತುಂಬಿ ಕೊಳ್ಳಬಹುದು. ಈ ನಡುವೆ ಮಹಿಳಾ ಹುಲಿವೇಷಧಾರಿಗಳ ತಂಡವು ವಿಶೇಷವಾಗಿ ಗಮನ ಸೆಳೆಯುತ್ತಿದೆ.
ಅಷ್ಟಮಿಗೂ ಹುಲಿವೇಷಕ್ಕೂ ಬಿಡಿಸಲಾರದ ನಂಟು. ಉಡುಪಿಯ ಅಷ್ಟಮಿ ಸಂಭ್ರಮ ಎಂದರೆ ಹುಲಿವೇಷ. ಮಾರ್ಪಳ್ಳಿ, ಅಲೆವೂರು, ನಿಟ್ಟೂರು, ಕೊರಂಗ್ರಪಾಡಿ, ಕಡಿಯಾಳಿ, ಮಲ್ಪೆ ಸಹಿತ ಮೊದಲಾದ ಕಡೆಗಳಲ್ಲಿ ಪ್ರಸಿದ್ಧ ಹುಲಿವೇಷ ತಂಡಗಳು ಜನರನ್ನು ರಂಜಿಸಿ, ಸಾಮಾಜಿಕ ಸೇವೆ ಮಾಡುತ್ತಾರೆ. ಇತ್ತೀಚೆಗೆ ಮಹಿಳೆಯರು ಹುಲಿವೇಷ ಹಾಕುತ್ತಿರುವುದು ಕಂಡು ಬರುತ್ತಿದೆ. ದರ್ಪಣ ನೃತ್ಯ ಸಂಸ್ಥೆಯ ಬಾಲಕಿ, ಯುವತಿಯರು, ಮಹಿಳೆಯರು ಒಳಗೊಂಡ ತಂಡವು ಈ ಬಾರಿ ಹುಲಿವೇಷದಲ್ಲಿ ಮಿಂಚಲಿದ್ದಾರೆ.