ಉಡುಪಿ: ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ ಹಾಗೂ ವಿವಿಧ ಬೇಡಿಕೆಗಳನ್ನು ರಾಜ್ಯ ಸರಕಾರದ ಗಮನ ಸೆಳೆಯುವಲ್ಲಿ ಉಡುಪಿ ಕಾಂಗ್ರೆಸ್ ನಾಯಕರು ವಿಫಲವಾಗಿದ್ದಾರೆ ಆರೋಪಿಸಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆಯ ನೇತೃತ್ವದಲ್ಲಿ ‘ಉಡುಪಿ ಕಾಂಗ್ರೆಸ್ ಹಠಾವೋ-ದಲಿತ್ ಬಚಾವೋ’ ಹೆಸರಿನಡಿ ವಿಶಿಷ್ಟ ಪ್ರತಿಭಟನೆಯನ್ನು ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ನಡೆಸಲಾಯಿತು.
ಸಂವಿಧಾನದ ಪರ, ದಲಿತರ ರಕ್ಷಕರು ಎಂದು ಹೇಳಿಕೊಂಡು ಓಟು ಪಡೆಯುವ “ಉಡುಪಿ ಕಾಂಗ್ರೆಸ್ ಪಕ್ಷವು ಕಳೆದ ಹಲವು ದಶಕಗಳಿಂದ ಉಡುಪಿ ಜಿಲ್ಲೆಯಲ್ಲಿ ದಲಿತರ ಮೇಲೆ ನಡೆಯುವ ಅನ್ಯಾಯ, ಅಕ್ರಮ, ದಬ್ಬಾಳಿಕೆ ಹಾಗೂ ದೌರ್ಜನ್ಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಈ ಕುರಿತು ಸಾಕಷ್ಟು ಬಾರಿ ದಲಿತರು ಅಳಲು ತೋಡಿಕೊಂಡರೂ ಜಿಲ್ಲಾ ಕಾಂಗ್ರೆಸ್ ನಾಯಕರು ದಲಿತರ ಧ್ವನಿಗೆ ಸ್ಪಂದಿಸುತ್ತಿಲ್ಲ. ನಿರಂತರ ದಲಿತ ಸಮಾಜವನ್ನು ಮೋಸ ಮಾಡುತ್ತಿರುವ ಉಡುಪಿಯ ಕಾಂಗ್ರೆಸ್ ಪಕ್ಷ, ಜಾತಿಯ ನೆಲೆಯಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಹೋರಾಟಗಾರ ಜಯನ್ ಮಲ್ಪೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ, ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ‘ಬಿ’ ರಿಪೋಟ್ ಹಾಕುವ ಪೊಲೀಸ್ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ದಲಿತರ ಕುಂದುಕೊರತೆ ಸಭೆಗಳನ್ನು ನಿರ್ಲಕ್ಷಿಸುತ್ತಿರುವ ಜಿಲ್ಲಾಡಳಿತದ ವಿದುದ್ಧ ಧ್ವನಿ ಎತ್ತುತ್ತಿಲ್ಲ. ಜಿಲ್ಲೆಯ ಅನೇಕ ಇಖಾಖೆಯಲ್ಲಿ ವರ್ಷನೂಗಟ್ಟಲೆ ದಲಿತ ವಿರೋಧಿ ಅಧಿಕಾರಿಗಳು, ನೌಕರರು ಇದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.