ಕೋಟದಲ್ಲಿ ದ್ವಿತೀಯ ದಿನದ ಜಿಲ್ಲಾ ಸಹಕಾರಿ ಸಪ್ತಾಹ ಕಾರ್ಯಕ್ರಮ ವ್ಯಕ್ತಿತ್ವ ವಿಕಸನ ಶಿಬಿರ, ಸಾಲೇತರ ಸಹಕಾರಿ ಸಂಸ್ಥೆಗಳ ಪುನಶ್ಚೇತನ ಕುರಿತು ಕಾರ್‍ಯಗಾರ ಕೋಟ, ನ.೧೫: ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್, ಜಿಲ್ಲಾ ಸಹಕಾರಿ ಇಲಾಖೆ, ಕೋಟ ಸಹಕಾರಿ ವ್ಯಾವಸಾಯಿಕ ಸಂಘ ಆಶ್ರಯದಲ್ಲಿ, ಸಹಕಾರಿ ಸಪ್ತಾಹ ಪ್ರಯುಕ್ತ ದ್ವಿತೀಯ ದಿನದ ಉಡುಪಿ ಜಿಲ್ಲಾ ಮಟ್ಟದ ಕಾರ್‍ಯಕ್ರಮ ಕೋಟ ಸಹಕಾರಿ ವ್ಯಾವಸಾಯಿಕ ಸಂಘದಲ್ಲಿ ನ.೧೫ರಂದು ಜರಗಿತು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅರ್ಥಿಕ ಸಂಸ್ಥೆಗಳಲ್ಲಿ ಗ್ರಾಹಕರ ನೇರ ಭಾಗವಹಿಸುವಿಕೆ ಮತ್ತು ಆಡಳಿತ ಮಂಡಳಿಯಲ್ಲಿ ನೇರವಾಗಿ ಸೇವೆ ಮಾಡುವ ಅವಕಾಶ ಇರುವುದು ಕೇವಲ ಸಹಕಾರಿ ವ್ಯವಸ್ಥೆಯಲ್ಲಿ ಮಾತ್ರ. ಹೀಗಾಗಿ ಈ ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿ, ಪ್ರಬುದ್ಧವಾಗಿ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಮಹಿಳೆಯರು ಪಾರದರ್ಶಕವಾದ ವ್ಯವಹಾರಕ್ಕೆ ಹೆಸರುವಾಸಿಯಾಗಿದ್ದಾರೆ. ಆದ್ದರಿಂದಲೇ ಸ್ವಸಹಾಯ ಸಂಘಗಳಲ್ಲಿ ಶೆ.೯೯ರಷ್ಟು ಸಾಲ ಮರುಪಾವತಿಯಾಗುತ್ತಿದೆ. ಸಹಕಾರಿ ಸಂಸ್ಥೆಗಳು ಪ್ರಗತಿಯ ಕಡೆಗೆ ಮುಖಮಾಡಬೇಕಾದರೆ ಆಡಳಿತ ಮಂಡಳಿ ಹಾಗೂ ಸಿಬಂದಿಗಳ ಉತ್ತಮ ಸೇವೆ ಅಗತ್ಯ. ಅದೇ ರೀತಿ ಕೋಟ ಸಹಕಾರಿ ಸಂಸ್ಥೆ ಅಧ್ಯಕ್ಷ ತಿಮ್ಮ ಪೂಜಾರಿಯವರ ನೇತೃತ್ವದ ಉತ್ತಮ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪರಿಪೂರ್ಣ ಸೇವೆಯಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.
ಕೋಟ ವಿವೇಕ ವಿದ್ಯಾಸಂಸ್ಥೆಯ ಉಪನ್ಯಾಸಕ ಸಂಜೀವ ಸಿ.ಗುಂಡ್ಮಿ ದಿಕ್ಸೂಚಿ ಮಾತನಾಡಿ, ಯುವ ಜನತೆ ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಅರ್ಥಿಕ ಸಹಕಾರಿ ಸಂಸ್ಥೆಗಳ ಜತೆಗೆ ಸಾಲೇತರ ಸಂಸ್ಥೆಗಳ ಅಭಿವೃದ್ಧಿಗೂ ಸರಕಾರ ವಿವಿಧ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಕೋಟ ಸಹಕಾರಿ ಸಂಘದ ಅಧ್ಯಕ್ಷ ಜಿ.ತಿಮ್ಮ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಉಡುಪಿxpress ‘ಸಹಕಾರ ಸೌರಭ‘ ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು. ಸ್ವಸಹಾಯ ಗುಂಪುಗಳ ಸದಸ್ಯರಿಗೆ ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ ಸ್ಪರ್ಧಾಕಾರ್ಯಕ್ರಮ ಜರಗಿತು. ಸಾಲೇತರ ಸಹಕಾರ ಸಂಘಗಳ ಪುನಶ್ಚೇತನ ಮತ್ತು ಅರ್ಥಿಕ ಸೇರ್ಪಡೆಕುರಿತು ಕಾರ್‍ಯಗಾರ ನೆರವೇರಿತು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಹಾಲಪ್ಪ ಕೋಡಿಹಳ್ಳಿ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಕೆ.ಕೊರಗ ಪೂಜಾರಿ, ಶ್ರೀಧರ ಪಿ.ಎಸ್., ಮನೋಜ್ ಕರ್ಕೇರ, ಸಾಸ್ತಾನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಅಡಿಗ, ಕೋಟ ಸಹಕಾರಿ ಸಂಸ್ಥೆಯ ನಿರ್ದೇಶಕರಾದ ರಂಜಿತ್ ಕುಮಾರ್, ಅಚ್ಯುತ್ ಪೂಜಾರಿ ಇದ್ದರು. ಕೋಟ ಸಹಕಾರಿ ಸಂಸ್ಥೆಯ ಸಿಇಒ ಶರತ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಸಿಬ್ಬಂದಿ ಶಾಲಿನಿಹಂದೆ ಕಾರ್ಯಕ್ರಮ ನಿರೂಪಿಸಿದರು.