ಉಡುಪಿ: ಸಂಗೀತ ಸಭಾದ ವತಿಯಿಂದ ಪದ್ಮ ಭೂಷಣ ಪುರಸ್ಕೃತ ಪಂಡಿತ್ ರಾಜನ್ ಮಿಶ್ರಾಜೀ ಅವರ ಸ್ಮರಣೆಯ ಅಂಗವಾಗಿ ಇದೇ ಅಕ್ಟೋಬರ್ 28ರಂದು ಸಂಜೆ 5.30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಗೀತಾ ಸಭಾದ ಅಧ್ಯಕ್ಷ ರಂಗ ಪೈ ತಿಳಿಸಿದರು.
ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೀತ ಸಭಾ ಕಳೆದ 60 ವರ್ಷಗಳಿಂದ ಹತ್ತು ಹಲವಾರು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದು, ಜನಮನ್ನಣೆಗೆ ಪಾತ್ರವಾಗಿದೆ ಎಂದರು.
ಈ ಸಂಗೀತ ಕಾರ್ಯಕ್ರಮದಲ್ಲಿ ಮೊದಲಿಗೆ ಉಸ್ತಾದ್ ರಫೀಕ್ ಖಾನ್ ಅವರಿಂದ ಸಿತಾರ ವಾದನ ನಡೆಯಲಿದೆ. ಆ ಬಳಿಕ ಪಂಡಿತ್ ರಾಜನ್ ಮಿಶ್ರಾಜಿ ಅವರ ಮಕ್ಕಳಾದ ಪಂಡಿತ್ ರಿತೇಶ್ ಮಿಶ್ರ ಹಾಗೂ ಪಂಡಿತ್ ರಜನೀಶ್ ಮಿಶ್ರ ಅವರು ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ. ಇವರಿಗೆ ಸಹಕಲಾವಿದರಾದ ಪ್ರಸಾದ್ ಕಾಮತ್ (ಹಾರ್ಮೋನಿಯಂ) ಮತ್ತು ಹೇಮಂತ್ ಜೋಶಿ (ತಬಲ) ಸಹಕಾರ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶ ಇರಲಿದ್ದು, ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಸಂಧ್ಯಾ ಕಾಮತ್ ಹಾಗೂ ಅಜಿತ್ ಪೈ ಇದ್ದರು.