ಉಡುಪಿ: ಉಡುಪಿಯ ಅಂಬಲಪಾಡಿಯ ಗಾಂಧಿನಗರದ ಮನೆಯೊಂದರಲ್ಲಿ ನಡೆದ ಅಗ್ನಿ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾರ್ ಮಾಲೀಕ ರಮಾನಂದ ಶೆಟ್ಟಿ ಅವರ ಪತ್ನಿ ಅಶ್ವಿನಿ (43) ಅವರು ಚಿಕಿತ್ಸೆ ಫಲಿಸದೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅಂಬಲಪಾಡಿಯ ಶೆಟ್ಟಿ ಬಾರ್ & ರೆಸ್ಟೋರೆಂಟ್‌ನ ಮಾಲೀಕರಾಗಿರುವ ರಮಾನಂದ ಶೆಟ್ಟಿ ಅವರ ಮನೆಯಲ್ಲಿ ಸೋಮವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿತ್ತು. ಮನೆಯಲ್ಲಿ ಆವರಿಸಿದ್ದ ದಟ್ಟಹೊಗೆಯಿಂದ ಉಸಿರುಗಟ್ಟಿ ರಮಾನಂದ ಶೆಟ್ಟಿ ಅವರು ನಿನ್ನೆ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರ ಪತ್ನಿ ಅಶ್ವಿನಿ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಆದರೆ, ಇಂದು ಅವರು ಕೂಡ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಮನೆಯಲ್ಲಿ ನಡೆದ ಅಗ್ನಿ ದುರಂತವು ದಂಪತಿಯನ್ನು ಬಲಿ ಪಡೆದಿದೆ. ಅದೃಷ್ಟವಶಾತ್ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಮಂದಿ ಮಲಗಿದ್ದ ವೇಳೆ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಜ್ವಾಲೆಗೆ ಇನ್ವರ್ಟರ್ ಸೇರಿದಂತೆ ಹಲವಾರು ಸೊತ್ತುಗಳು ಸುಟ್ಟು ಹೋಗಿವೆ.