ಉಡುಪಿ: ಸಣ್ಣ ಕೈಗಾರಿಕೆಗಳ ಉದ್ಯಮಗಳನ್ನು ಉತ್ತೇಜಿಸಲು ಸರ್ಕಾರ ಸದಾ ಬದ್ಧವಾಗಿದೆ. ಸರ್ಕಾರಗಳು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಹಲವು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಉದ್ದಿಮೆದಾರರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಹೇಳಿದರು.
ಅವರು ಗುರುವಾರ ನಗರದ ಕಡಿಯಾಳಿ ಜಂಕ್ಷನ್‌ನ ದಿ ಓಷನ್ ಪರ್ಲ್ ನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕರ್ನಾಟಕ ಸರಕಾರ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವರ ಸಹಯೋಗದಲ್ಲಿ ಎಂ.ಎಸ್.ಎಂ.ಇ ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (ಆರ್.ಎ.ಎಂ.ಪಿ) ಯೋಜನೆಯಡಿ ಲೀನ್ ಯೋಜನೆ ಮತ್ತು ಝಡ್.ಇ.ಡಿ ಹಾಗೂ ರಫ್ತು ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆ ಉದ್ದಿಮೆಗಳನ್ನು ಇನ್ನಷ್ಟು ಸ್ಥಾಪಿಸುವ ಮೂಲಕ ಸ್ಥಳಿಯರಿಗೆ ಉದ್ಯೋಗ ದೊರಕಿಸಲು ಮುಂದಾಗಬೇಕು. ಉದ್ಯಮಿಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ಕೊಡಲು ಸರಕಾರ ಬದ್ಧವಾಗಿದೆ. ಸರಕಾರದ ಯೋಜನೆಗಳ ಪ್ರಯೋಜನ ಪಡೆದುಕೊಂಡು ಸ್ವಯಂ ಉದ್ಯೋಗ ಸ್ಥಾಪನೆ ಮಾಡಿ, ಮತ್ತಷ್ಟು ಜನರಿಗೆ ಕೆಲಸ ನೀಡಲು ಮುಂದೆ ಬರಬೇಕು ಎಂದರು.
ಹೊಸ ಕೈಗಾರಿಕೆಗಳನ್ನು ಸಾಕಷ್ಟು ಶ್ರಮ ವಹಿಸಿ, ಪ್ರಾರಂಭಿಸಲಾಗಿರುತ್ತದೆ. ಕೈಗಾರಿಕೆಗಳಲ್ಲಿ ತಾವು ತಯಾರಿಸುವ ವಸ್ತುವಿನಲ್ಲಿ ದೋಷವುಂಟಾದಾಗ ರಫ್ತು ಮಾಡಲು ಸಾಧ್ಯವಾಗುವುದಿಲ್ಲ. ವಸ್ತುಗಳನ್ನು ತಯಾರಿಸುವ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಅದರ ತ್ಯಾಜ್ಯ ವಸ್ತಗಳು ನದಿ, ಸಮುದ್ರಕ್ಕೆ ಸೇರಿದಾಗ ಜಲಚರಗಳೊಂದಿಗೆ ಮನುಷ್ಯನಿಗೂ ಸಹ ಹಾನಿಯುಂಟಾಗುತ್ತದೆ. ಇದನ್ನು ನಿಭಾಯಿಸುವ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಸರ್ಕಾರಿ ಜಮೀನಿನ ಲಭ್ಯತೆ ಕಡಿಮೆ ಇದೆ. ಸಣ್ಣ ಕೈಗಾರಿಕೆಗಳಿಗೆ ಭೂಮಿ ಪಡೆದವರು ಅದನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳಬೇಕು. ಕೈಗಾರಿಕೆಗಳನ್ನು ಆರಂಭಿಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ನಂದಿಕೂರು, ಬೆಳಪು, ಬೈಂದೂರಿನ ಸರ್ಕಾರಿ ಭೂಮಿಯನ್ನು ಹಾಗೂ ಖಾಸಗಿ ವ್ಯಕ್ತಿಗಳಿಂದ ಭೂಮಿಯಲ್ಲಿ ಹೊಸ ಕೈಗಾರಿಕೆಗಳ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 12500 ಸಣ್ಣ ಕೈಗಾರಿಕೆಗಳು, 47-50 ಮಧ್ಯಮ ಕೈಗಾರಿಕೆಗಳು ಹಾಗೂ 7 ಬೃಹತ್ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 132,000 ಜನ ಎಂ.ಎಸ್.ಎಂ.ಇ ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇದು ಅವರುಗಳಿಗೆ ಜೀವನಾದಾರವಾಗಿದ್ದು, ಅದನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ ಎಂದ ಅವರು, ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾ ಮಟ್ಟದಲ್ಲಿರುವ ವಿವಿಧ ಎಂಟು ಸಮಿತಿಗಳ ಸಭೆಗಳನ್ನು ನಿರಂತರವಾಗಿ ನಡೆಸುವುದರೊಂದಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯ ಶಿಕ್ಷಣವಂತ ಯುವಕರು ಉದ್ಯೋಗಕ್ಕಾಗಿ ವಿವಿಧೆಡೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ, ಅವರಿಗೆ ಇಲ್ಲಿಯೇ ಉದ್ಯೋಗಾವಕಾಶ ದೊರೆತಲ್ಲಿ ಕುಟುಂಬದವರೊಂದಿಗೆ ಇಲ್ಲಿಯೆ ನೆಲೆಕಂಡುಕೊಳ್ಳುತ್ತಾರೆ ಎಂದರು.
ಕಾಸಿಯಾ ಅಧ್ಯಕ್ಷ ಎಂ.ಜಿ. ರಾಜಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತೀಚೆಗೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಇ-ಖಾತಾವು ಸಣ್ಣ ಕೈಗಾರಿಕೆಗಳಿಗೆ ವ್ಯವಹರಿಸಲು ತೊಂದರೆಯನ್ನುಂಟುಮಾಡಿದೆ. ಪಂಚಾಯತ್ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ಗಳಿಲ್ಲದೇ ಯಾವುದೇ ನೋಂದಣ, ಮರು ನೋಂದಣಿ ಸೇರಿದಂತೆ ಮತ್ತಿತರ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಮುಖ್ಯಮಂತ್ರಿಗಳ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗಿದೆ ಎಂದ ಅವರು, ಸಣ್ಣ ಕೈಗಾರಿಕೆಗಳಿಗೆ ಅಗತ್ಯವಿರುವ ನಿವೇಶನದ ಕೊರತೆ, ಹಾಲಿ ಕೈಗಾರಿಕಾ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಗ್ರಾö್ಯಚ್ಯುಟಿ, ಕನಿಷ್ಠ ವೇತನ ಜಾರಿಯ ಮರು ಪರಿಶೀಲನೆ, ಸೇರಿದಂತೆ ಅನೇಕ ಸಮಸ್ಯೆಗಳು ಸಣ್ಣ ಕೈಗಾರಿಕೋದ್ಯಮಗಳಿಗೆ ಇವೆ. ಇವುಗಳನ್ನು ಆದ್ಯತೆಯ ಮೇಲೆ ಪರಿಹರಿಸಿಕೊಡಬೇಕು ಎಂದರು.
ರಫ್ತು ಕುರಿತು ಸತೀಶ್ ಕೋಟಾ, ಝಡ್.ಇ.ಡಿ ಯೋಜನೆ ಕುರಿತು ರೇಣುಕಾ ಹಾಗೂ ಲೀನ್ ಯೋಜನೆ ಕುರಿತು ಡಾ. ಎಸ್.ಎಂ ಜಗದೀಶ್ ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ಐ.ಇ.ಡಿ.ಎಸ್ ಜಂಟಿ ನಿರ್ದೇಶಕ ಡಾ. ಕೆ ಸೊಕ್ರಾಟಿಸ್, ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಕುಂದರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ವಿ ನಾಯಕ್, ವಿ.ಟಿ.ಪಿ.ಸಿ ಮಂಗಳೂರು ವಿಭಾಗದ ಉಪನಿರ್ದೇಶಕ ಮಂಜುನಾಥ್ ಹೆಗಡೆ, ಕಾಸಿಯಾ ಉಪಾಧ್ಯಕ್ಷ ಗಣೇಶ್ ರಾವ್ ಬಿ.ಆರ್, ಖಜಾಂಜಿ ಮಂಜುನಾಥ್ ಹೆಚ್, ಕೈಗಾರಿಕಾ ಉದ್ದಿಮೆದಾರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಸಾಗರ್ ನಿರೂಪಿಸಿ, ವಂದಿಸಿದರು.












