ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಿಷನ್ ಶಕ್ತಿ ಯೋಜನೆಯ ಸಂಬಾಲ್ ಉಪಯೋಜೆಯಡಿ ಕಾರ್ಯನಿರ್ವಹಿಸುತ್ತಿರುವ ‘ಸಖಿ’ ಒನ್ ಸ್ಟಾಪ್ ಸೆಂಟರ್ ಯೋಜನೆಯು ಸಂಕಷ್ಟದಲ್ಲಿರುವ ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಕಾನೂನು ಮತ್ತು ಪೊಲೀಸ್ ನೆರವು, ತಾತ್ಕಾಲಿಕ ಆಶ್ರಯ ಹಾಗೂ ಆಪ್ತ ಸಮಾಲೋಚನೆ, ಅಗತ್ಯ ತುರ್ತು ಸೇವೆಗಳನ್ನು ನಗರದ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದ ಆವರಣದಲ್ಲಿ 24*7ರಂತೆ ಒದಗಿಸಲಾಗುತ್ತಿದೆ.
ತುರ್ತು ಸೇವೆಗಾಗಿ ಸರಕಾರವು ವಾಹನ ವ್ಯವಸ್ಥೆಯನ್ನು ಕಲ್ಪಿಸಿದ್ದು ಸದರಿ ವಾಹನಕ್ಕೆ ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಚಾಲನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲ ಸಿ.ಕೆ, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ನಿರೂಪಾಧಿಕಾರಿ ಅನುರಾಧ ಹಾದಿಮನಿ, ಕಛೇರಿ ಅಧೀಕ್ಷಕರು, ಸಖಿ ಒನ್ ಸ್ಟಾಪ್ ಸೆಂಟರ್ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.