ಉಡುಪಿ:ಶಕ್ತಿ ಸದನ ಪ್ರಾರಂಭಿಸಲು ಸ್ವಯಂ ಸೇವಾ ಸಂಸ್ಥೆೆಗಳಿಂದ ಅರ್ಜಿ ಆಹ್ವಾನ

ಉಡುಪಿ: ಭಾರತ ಸರ್ಕಾರದ ವತಿಯಿಂದ ಸ್ವಾಧಾರ ಮತ್ತು ಉಜ್ವಲ ಯೋಜನೆಗಳು ಅನುಷ್ಟಾನಗೊಳ್ಳುತ್ತಿದ್ದು, ಸ್ವಾಧಾರ ಗೃಹ ಯೋಜನೆಯ ಮುಖ್ಯ ಉದ್ದೇಶ ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗೆ ಆಶ್ರಯ, ತರಬೇತಿ ಹಾಗೂ ಶಿಕ್ಷಣ ನೀಡುವುದರ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಸಶಕ್ತರನ್ನಾಗಿ ಮಾಡುವುದಾಗಿರುತ್ತದೆ. ಉಜ್ವಲ ಯೋಜನೆಯು ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟಲು ಹಾಗೂ ಸಾಗಾಣಿಕೆ ಮತ್ತು ವಾಣಿಜ್ಯ ಲೈಂಗಿಕ ದುರುಪಯೋಗಕ್ಕೆ ಒಳಪಟ್ಟವರನ್ನು ರಕ್ಷಿಸಲು ಮತ್ತು ಪುನರ್ವಸತಿ ಕಲ್ಪಿಸಲು ಹಾಗೂ ಇವರುಗಳ ಕುಟುಂಬದವರೊಂದಿಗೆ ಪುನರ್ ವಿಲೀನಗೊಳಿಸುವ ಉದ್ದೇಶವನ್ನು ಹೊಂದಿರುತ್ತದೆ.

ಕೇಂದ್ರ ಸರ್ಕಾರದ ಮಿಷನ್ ಶಕ್ತಿ ಯೋಜನೆಯ ಮಾರ್ಗಸೂಚಿಯನ್ವಯ ಈ ಮೇಲಿನ ಎರಡೂ ಯೋಜನೆಗಳನ್ನು ವಿಲೀನಗೊಳಿಸಿ, “ಶಕ್ತಿ ಸದನ” ಎಂಬ ಯೋಜನೆಯಡಿ ಅನುಷ್ಟಾನಗೊಳಿಸಬೇಕಾಗಿದ್ದು, ಸದರಿ ಯೋಜನೆಯನ್ನು ಜಿಲ್ಲಾ ಕೇಂದ್ರಸ್ಥಳದಲ್ಲಿ ಪ್ರಾರಂಭಿಸಲಾಗುವ ಹಿನ್ನೆಲೆ ಸದರಿ ಯೋಜನೆಯನ್ನು ಸ್ವಯಂ ಸೇವಾ ಸಂಸ್ಥೆಯಿಂದ ಅನುಷ್ಟಾನಗೊಳಿಸುವಂತೆ ಆದೇಶಿಸಲಾಗಿದ್ದು, ಆಸಕ್ತ ಸ್ವಯಂ ಸೇವಾ ಸಂಸ್ಥೆಗಳಿಂದ ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದೆ.

ಪ್ರಸ್ತಾವನೆಗಳನ್ನು ಸಲ್ಲಿಸಲು ಮಾರ್ಚ್ 21 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಿ ಬ್ಲಾಕ್, 1ನೇ ಮಹಡಿ, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 0820-2574978 ಅನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಕಚೇರಿ ಪ್ರಕಟಣೆ ತಿಳಿಸಿದೆ.