ಉಡುಪಿ:ವಿಶ್ವ ಪಾರ್ಶ್ವವಾಯು ದಿನಾಚರಣೆ

ಉಡುಪಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ
ಸರ್ವೇಕ್ಷಣ ಘಟಕ ಎನ್.ಸಿ.ಡಿ ವಿಭಾಗ, ಜಿಲ್ಲಾ ಆಸ್ಪತ್ರೆ ಉಡುಪಿ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ಸಿ.ಎಸ್.ಐ ಲೋಂಬಾರ್ಡ ಮೆಮೋರಿಯಲ್ ಕಾಲೇಜ್ ಆಪ್ ನರ್ಸಿಂಗ್ ಉಡುಪಿ ಹಾಗೂ ಕಾಲೇಜು ಆಪ್ ನರ್ಸಿಂಗ್ ಮಣಿಪಾಲ್ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಅಜ್ಜರಕಾಡುವಿನ ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ ಪಾರ್ಶ್ವವಾಯು ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮವು ಮಂಗಳವಾರ
ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ.ಗಡಾದ,ಸಾರ್ವಜನಿಕರಲ್ಲಿ ಪಾಶ್ವವಾಯು ಬಗ್ಗೆ ಜಾಗೃತಿ ಮೂಡಿಸಲು ಯುವ ಜನರು ಕಾರ್ಯಪ್ರವೃತರಾಗಬೇಕು ಎಂದರು.

ಕ್ರೀಡಾಪಟು ಉದಯಕುಮಾರ್ ಶೆಟ್ಟಿ ಮಾತನಾಡಿ, ಕ್ರೀಡಾ ಮನೋಭಾವ ಮತ್ತು ಜೀವನ ಶೈಲಿಯು ನಮ್ಮ ಸ್ವಾಸ್ಥ ಜೀವನಕ್ಕೆ ಉತ್ತೇಜನ ನೀಡುತ್ತದೆ. ಈ ವರ್ಷದ ಸ್ಟ್ರೋಕ್ ದಿನದ ಘೋಷಣೆಯಂತೆ ‘ಕ್ರೀಡೆಯ ಭಾವನಾತ್ಮಕ ಸಂಬಂಧ ಮೂಲಕ ಸ್ಟ್ರೋಕ್ ಅನ್ನು
ಅತಿ ಜೀವಿಸೋಣ’ ಎಂದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅಶೋಕ್ ಹೆಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದಲ್ಲಿ 1 ಲಕ್ಷದ ಜನಸಂಖ್ಯೆಗೆ 145
ಜನರು ಸ್ಟ್ರೋಕ್ ಗೆ ತುತ್ತಾಗುತ್ತಿದ್ದು, ಪ್ರತಿ ಒಂದು ನಿಮಿಷದಲ್ಲಿ 3 ಜನ ಸ್ಟ್ರೋಕ್ ನ ಆಘಾತ ಎದುರಿಸುತ್ತಿದ್ದಾರೆ ಈ ನಿಟ್ಟಿನಲ್ಲಿ 2010ರಲ್ಲಿ public Health Emergency ಎಂದು, ಅಂತರಾಷ್ಟ್ರೀಯ ಸ್ಟ್ರೋಕ್ ಸಂಸ್ಥೆ ಘೋಷಿಸಿದೆ. ಇದನ್ನು ಕಡಿಮೆ
ಮಾಡಲು ಯವಜನತೆ ತಮ್ಮ ಆಹಾರ ಶೈಲಿ ಮತ್ತು ದೈಹಿಕ ಚಟುವಟಿಕೆಗೆ ಕಾಳಜಿ ವಹಿಸಬೇಕಿದೆ ಎಂದ ಅವರು,ಸ್ಟ್ರೋಕ್ ನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ನರ್ಸಿಂಗ್ ವಿದ್ಯಾರ್ಥಿಗಳಿಂದ ನಿರಂತರ ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ವೈದ್ಯಕೀಯ ತಜ್ಞ ಡಾ.ನಿಕಿನ್ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಸಿ.ಎಸ್.ಐ ಲೋಂಬೋರ್ಡ್ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ಟ್ರೋಕ್ ನ ಬಗ್ಗೆ ಜಾಗೃತಿ ಮೂಡಿಸುವ ಕಿರು ನಾಟಕ ಪ್ರದರ್ಶನ ನಡೆಯಿತು.

ಸ್ಟ್ರೋಕ್ ಗೆ ಸಂಬಂಧಿಸಿದಂತೆ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು ಹಾಗೂ ಸಾರ್ವಜನಿಕರಿಗೆ
ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರತ್ನ, ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿಗಳಾದ ಡಾ.ವಾಸುದೇವ್, ಭಾರತೀಯ ವೈದ್ಯಕೀಯ ಸಂಘ ಕರಾವಳಿ ಶಾಖೆ ಉಡುಪಿ ಇದರ ಅಧ್ಯಕ್ಷರಾದ ಡಾ. ಕೆ ಸುರೇಶ್
ಶೆಣೈ. ಲೊಂಬೋರ್ಡ್ ಮೆಮೋರಿಯಲ್ ನರ್ಸಿಂಗ್ ಕಾಲೇಜು ಉಪನ್ಯಾಸಕಿ ಮಾಲತಿ, ಉಡುಪಿ ಕಾಲೇಜು ಆಫ್ ನರ್ಸಿಂಗ್ ಇಲ್ಲಿನ ಉಪನ್ಯಾಸಕಿ ಮಾಲಾಶ್ರೀ ಉಪಸ್ಥಿತರಿದ್ದರು.

ಸೈಕಾಲಜಿಸ್ಟ್ ಅಬ್ದುಲ್ ಸಮದ್ ಸ್ವಾಗತಿಸಿ, ಮನು ಎಸ್.ಬಿ ನಿರೂಪಿಸಿ, ಬ್ರೇನ್ ಹೆಲ್ತ್ ಉಪಕ್ರಮದ ಜಿಲ್ಲಾ ಸಂಯೋಜಕಿ ಐಶ್ವರ್ಯ ವಂದಿಸಿದರು.