ಉಡುಪಿ:ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯು ಭವಿಷ್ಯದ ವಿಜ್ಞಾನಿಗಳು ಮತ್ತು ನಾವಿನ್ಯಕಾರರಿಗೆ ಸ್ಪೂರ್ತಿ ನೀಡುವ ವೇದಿಕೆಯಾಗಲಿದೆ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ:ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯು ಭವಿಷ್ಯದ ಪೀಳಿಗೆಯ ವಿಜ್ಞಾನಿಗಳು ಮತ್ತು ನಾವಿನ್ಯಕಾರರಿಗೆ ಸ್ಪೂರ್ತಿ ನೀಡುವ ವೇದಿಕೆಯಾಗಿಯೂ ಹಾಗೂ ಯುವ ಮನಸ್ಸುಗಳಲ್ಲಿ ವಿಜ್ಞಾನ ಮತ್ತು ಪರಿಶೋಧನೆಯ ಬಗ್ಗೆ ಉತ್ಸಾಹ ತುಂಬುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

ಅವರು ಶುಕ್ರವಾರ ನಗರದ ಒಳಕಾಡು ಸಂಯುಕ್ತ ಪ್ರೌಢಶಾಲೆಯಲ್ಲಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ಮಂಡಳಿ, ಬಾರತೀಯ ವಿಜ್ಞಾನ ಸಂಸ್ಥೆ ಆವರಣ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಸರ್ ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.

ಭಾರತೀಯ ಭೌತಶಾಸ್ತ್ರ ವಿಜ್ಞಾನಿ ಸರ್ ಸಿ.ವಿ ರಾಮನ್ ಅವರು, ರಾಮನ್ ಪರಿಣಾಮವನ್ನು ಕಂಡು ಹಿಡಿದ ನೆನೆಪಿಗಾಗಿ ಪ್ರತಿ ವರ್ಷ ಫೆಬ್ರವರಿ 28 ಅನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯಾಗಾರವನ್ನು ಏರ್ಪಡಿಸುವುದರಿಂದ ಅವರುಗಳು, ಆದರಿಂದ ಆಗುವ ಲಾಭಗಳನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಜಿಲ್ಲೆ, ರಾಜ್ಯ ಹಾಗೂ ದೇಶದ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡುವಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ವೈಜ್ಞಾನಿಕ ಚಿಂತನೆಯನ್ನು ಮಕ್ಕಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಪ್ರತಿಯೊಂದು ಆಲೋಚನೆಗಳಿಗೂ ತಳಹದಿ ಇರಬೇಕು. ಮೂಢನಂಬಿಕೆಗಳನ್ನು ನಂಬಿ ಜೀವನ ನಡೆಸಬಾರದು. ಅದರ ಸತ್ಯಾನ್ವೇಷಣೆ ನಡೆಸಲು ಮುಂದಾಗಬೇಕು ಎಂದ ಅವರು, ಗ್ರಂಥಾಲಯಗಳ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ವಿಜ್ಞಾನಿಗಳು, ಹಿರಿಯರು, ಸ್ವಾತಂತ್ರ್ಯ ಹೋರಾಟಗಾರರ ಆತ್ಮಚರಿತ್ರೆಯನ್ನು ಓದುವುದರೊಂದಿಗೆ ಅವರ ಸಾಧನೆಯ ಹಾದಿಯನ್ನು ವಿದ್ಯಾರ್ಥಿಗಳು ಪಾಲಿಸುವುದರಿಂದ ಉತ್ತಮ ಜೀವನವನ್ನು ಹಾಗೂ ಸದೃಢ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಆರ್ಟಿಫಿಶಿಯಲ್ ಇನ್ಟೆಲಿಜೆನ್ಸಿಯನ್ನು ತಿಳಿದುಕೊಂಡು, ಅದನ್ನು ಜೀವನದ ಪ್ರತೀ ಹಂತದಲ್ಲಿಯೂ ಬಳಸಿಕೊಳ್ಳಲು ಮುಂದಾಗಬೇಕು ಎಂದ ಅವರು ಕೃತಕ ಬುದ್ದಿ ಮತ್ತೆಯನ್ನು ವಿವಿಧ ಕ್ಷೇತ್ರಗಳಲ್ಲಿ ಬಳಸಿಕೊಳ್ಳುವ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿದ್ದು, ವಿದ್ಯಾರ್ಥಿಗಳು ತಮ್ಮಲ್ಲಿರುವ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದಾಗಿದೆ ಎಂದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿ ವಿಶ್ವ ಪ್ರತಿಜ್ಞಾ ವಿಧಿ ಬೋಧಿಸಿದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಎಂ.ಐ.ಟಿಯ ಆಶ್ವಥ್ ರಾವ್, ಡಾ. ಮುರುಳಿಕೃಷ್ಣ, ಡಾ. ನೇಹಾ ಗಾಂಧಿ, ಡಾ.ಕವಿತಾ ಹಾಗೂ ಡಾ. ಮೋಹನ್‌ದಾಸ್ ಶೆಣೈ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹಾಗೂ ಕೃತಕ ಬುದ್ದಿಮತ್ತೆ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ, ಶಾಲಾ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ, ಎನ್.ಆರ್.ಡಿ.ಎಮ್.ಎಸ್ ತಾಂತ್ರಿಕ ಅಧಿಕಾರಿ ವಿಕ್ರಮ್ ಆರ್, ಶಾಲೆಯ ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಡಯಟ್ ಉಪ ಪ್ರಾಂಶುಪಾಲ ಅಶೋಕ್ ಕಾಮತ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.