ಉಡುಪಿ:ಬಂಟಕಲ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ

ಉಡುಪಿ:ಬಂಟಕಲ್‌ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ 11ನೇ “ಪದವಿ
ಪ್ರದಾನ” ಸಮಾರಂಭವು ದಿನಾಂಕ 22 ಸಪ್ಟೆಂಬರ್ 2024 ಭಾನುವಾರದಂದು ಕಾಲೇಜಿನ ಆವರಣದಲ್ಲಿ ನಡೆಯಿತು.

ಶ್ರೀ ಲಕ್ಷ್ಮೀಪತಿ ಭಟ್, ಹಿರಿಯ ಉಪಾಧ್ಯಕ್ಷರು, ಗ್ಲೋಬಲ್ ಮಾರ್ಕೆಟಿಂಗ್ ಆ್ಯಂಡ್ ಕಮ್ಯುನಿಕೇಶನ್ಸ್, ರೋಬೊಸಾಫ್ಟ್ ಟೆಕ್ನಾಲಜೀಸ್ ಇವರು ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತಮ್ಮ ಪದವಿ ಪ್ರದಾನ
ಉಪನ್ಯಾಸದಲ್ಲಿ ಮಾತನಾಡಿದ ಇವರು ಒಂದು ಉತ್ತಮ ಯೋಜನೆ ಇದ್ದರೆ ಸಾಲದು ಅದರ ಜೊತೆಗೆ ಯೋಜನೆಯನ್ನು ಕಾರ್ಯಗತಗೊಳಿಸಲು ಬೇಕಾದ
ಕಾರ್ಯಕ್ಷಮತೆ ಹೊಂದಿರಬೇಕು. ವಿದ್ಯಾರ್ಥಿಗಳು ತಮ್ಮ ಕಾರ್ಯಕ್ಷಮತೆಯನ್ನು ಅನುದಿನವೂ ವೃದ್ದಿಸಿಕೊಳ್ಳುವ ಅಗತ್ಯತೆಯನ್ನು ಮನದಟ್ಟು ಮಾಡಿಕೊಟ್ಟರು. ಅವರು ತಮ್ಮ ಉಪನ್ಯಾಸದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಪದವೀಧರರು ತಮ್ಮ ಜೀವನದಲ್ಲಿ ಭಕ್ತಿ, ಮಾನವೀಯತೆ, ಪ್ರಾಮಾಣಿಕತೆ, ಹೊಂದಾಣಿಕೆ, ಸ್ಥಿತಿಸ್ಥಾಪಕತ್ವ, ಮತ್ತು ಪಾಂಡಿತ್ಯ ಮುಂತಾದ ಆರು ತತ್ವಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು.

ಡಾ. ಎಲ್ ಎನ್ ಶೇಷಗಿರಿ, ಉಪನ್ಯಾಸಕರು, ಇಂಗ್ಲೀಷ್ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬೆಂಗಳೂರು ಇವರು ಸಮಾರಂಭದ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಇವರು ಮಾತನಾಡಿ ಒಬ್ಬ ವ್ಯಕ್ತಿಯು ಹುಟ್ಟಿನಿಂದ ಪದವಿಯವರೆಗಿನ ಕಲಿಕೆಯು, ಜೀವನದ ಉದ್ದೇಶವನ್ನು ತಿಳಿದುಕೊಳ್ಳಲು ಮತ್ತು ಉದ್ದೇಶವನ್ನು ಸಾಧಿಸಲು ಸಾಧ್ಯವಾಗುತ್ತದೆ. ಸಮಾಜದ ಮಾನವೀಯ ಮೌಲ್ಯಗಳ ಅಗತ್ಯತೆಯನ್ನು ಅರಿತು ಕಾರ್ಯನಿರ್ವಹಿಸಬೇಕೆಂದು ಪದವೀಧರರಿಗೆ ಕರೆ ನೀಡಿದರು.

ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್ ಇವರು ಪದವೀಧರರನ್ನು ಅಭಿನಂದಿಸುತ್ತಾ ಕೋವಿಡ್ ಸಂಕಷ್ಟದ ಸಮಯದಲ್ಲೂ ಕೂಡ ಸಂಸ್ಥೆಯ ಮೇಲೆ
ನಂಬಿಕೆ ಇಟ್ಟು ತಮ್ಮ ಬದ್ದತೆಯ ಮೂಲಕ ಪದವಿ ಪಡೆದ ಪದವೀಧರರು ಮತ್ತು ಪೋಷಕರನ್ನು ಶ್ಲಾಘಿಸಿದರು.

ಉಡುಪಿ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಆಶೀರ್ವಚನದಲ್ಲಿ ಪದವೀಧರರು ತಮ್ಮ ಮುಂದಿನ ಜೀವನಕ್ಕೆ ಸನ್ನದ್ಧರಾಗಿ ತಮ್ಮ ಕೌಶಲ್ಯದ
ಮೇಲೆ ಸರಿಯಾದ ಗಮನವನ್ನು ಕೇಂದ್ರಿಕರಿಸಿ ಜೀವನದ ಉದ್ದೇಶವನ್ನು ಸಾಧಿಸುವಲ್ಲಿ ಪ್ರಯತ್ನಿಸಬೇಕು ಹಾಗೂ ಯಾವುದೇ ಗೊಂದಲಗಳಿಗೆ
ಒಳಗಾಗದಂತೆ ಪದವೀಧರರಿಗೆ ಹಿತವಚನ ನೀಡಿದರು.

ಈ ಸಂದರ್ಭದಲ್ಲಿ ವಿಶ್ವ ವಿದ್ಯಾನಿಲಯದಿಂದ ಚಿನ್ನದ ಪದಕ ಪಡೆದ ಕುಮಾರಿ ರಕ್ಷಾ ಮತ್ತು ವಿಶ್ವವಿದ್ಯಾನಿಯದ ಬಿ ಇ ಹಾರ‍್ಸ್ ಪಡೆದ ಶೇಖ್ ಮೊಹಮ್ಮದ್ ಶುಹೂದ್ ಇವರನ್ನು ಸನ್ಮಾನಿಸಲಾಯಿತು. ಮಂಗಳೂರಿನ ಪ್ರತಿಷ್ಠಿತ ಎಸ್. ಎಲ್. ಶೇಟ್ ಜ್ಯುವೆಲ್ಲರ್ಸ್ ಇವರಿಂದ ಪ್ರಾಯೋಜಿತವಾದ ಚಿನ್ನದ ಪದಕಗಳನ್ನು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಜಿ ಅಕ್ಷತ, ಗಣಕಯಂತ್ರ ವಿಭಾಗದ ಶೇಖ್ ಮೊಹಮ್ಮದ್ ಶುಹೂದ್, ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ನಿಖಿತ ಶೆಟ್ಟಿ ಮತ್ತು ಮೆಕ್ಯಾನಿಕಲ್ ವಿಭಾಗದ ಶ್ರೀ ಅಂಕಿತ್
ಸುವರ್ಣ ಇವರ ಶೈಕ್ಷಣಿಕ ಸಾಧನೆಗಾಗಿ ನೀಡಿ ಆಶೀರ್ವದಿಸಿದರು. ಕಾಲೇಜಿನ ಸಂಶೋಧನಾ ಕೇಂದ್ರದಿಂದ ಡಾಕ್ಟರೇಟ್ ಪದವಿ ಪಡೆದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಂತಿಮ ವರ್ಷದಲ್ಲಿ ಪ್ರತಿ ವಿಭಾಗದಲ್ಲಿ ಅಧಿಕ ಅಂಕ ಪಡೆದ ನಾಲ್ಕು ವಿದ್ಯಾರ್ಥಿಗಳಿಗೆ ಶ್ರೀ ನಂದನ್ ಕುಮಾರ್ ಇನ್ನಂಜೆ ಇವರಿಂದ ಕೊಡಲ್ಪಟ್ಟ ವಿದ್ಯಾರ್ಥಿ
ವೇತನವನ್ನು ನೀಡಲಾಯಿತು.

ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಮುಂದಿನ ದಿನಗಳಲ್ಲಿ ವಿದ್ಯಾಸಂಸ್ಥೆಯ ಪದವೀಧರರು ಉತ್ತಮ
ಕಾರ್ಯಸಾಧನೆಗೈದು ಸಂಸ್ಥೆಗೆ ಹಾಗೂ ಹೆತ್ತವರಿಗೆ ಕೀರ್ತಿ ತರುವಂತೆ ಮನವಿ ಮಾಡಿದರು. ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ಶ್ರೀನಿವಾಸ ತಂತ್ರಿಗಳು, ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್, ಡೀನ್‌ಗಳಾದ ಡಾ.
ಸುದರ್ಶನ್ ರಾವ್, ಡಾ. ನಾಗರಾಜ್ ಭಟ್, ವಿವಿಧ ವಿಭಾಗಗಳ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಲೊಲಿಟ ಪ್ರಿಯಾ ಕ್ಯಾಸ್ತೆಲಿನೊ ಮತ್ತು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುಬ್ಬುಲಕ್ಷ್ಮಿ ಎನ್ ಕಾರಂತ್ ಇವರು ಅತಿಥಿಗಳನ್ನು ಪರಿಚಯಿಸಿದರು.

ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ಅವರು ಪದವೀಧರರಿಗೆ ಪ್ರಮಾಣವಚನ ಭೋದಿಸಿದರು. ಭೌತಶಾಸ್ತ್ರ ವಿಭಾಗದ
ಮುಖ್ಯಸ್ಥರಾದ ಡಾ.ರವೀಂದ್ರ ಹೆಚ್ ಜೆ ವಂದಿಸಿದರು.

ವಿದ್ಯಾರ್ಥಿನಿ ಚಿತ್ಕಲಾ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಪ್ರಾಧ್ಯಾಪಕರಾದ
ಶ್ರೀಮತಿ ಅಕ್ಷತಾ ರಾವ್ ಮತ್ತು ಅನಂತ್ ಮೋಹನ್ ಮಲ್ಯ ಕಾರ್ಯಕ್ರಮ ನಿರೂಪಿಸಿದರು.