ಉಡುಪಿ: ಗ್ರಾಹಕರ ರಕ್ಷಣೆಗಾಗಿಯೇ ಅನೇಕ ಹಕ್ಕು ಮತ್ತು ಕಾನೂನುಗಳಿವೆ. ಇವುಗಳನ್ನು ಪ್ರತಿಯೊಬ್ಬರೂ ತಿಳಿದುಕೊಂಡಾಗ ಮಾತ್ರ ದೈನಂದಿನ ಸರಕು ಮತ್ತು ಸೇವೆಗಳನ್ನು ಪಡೆಯುವಲ್ಲಿ ಕೆಲವೊಮ್ಮೆ ಎದುರಿಸುವ ವಂಚನೆ ಮತ್ತು ಮೋಸದಿಂದ ಪಾರಾಗಲು ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಹೇಳಿದರು.
ಅವರು ಇಂದು ನಗರದ ಎಸ್.ಎಮ್.ಎಸ್.ಪಿ ಸಂಸ್ಕೃತ ಅಧ್ಯಯನ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬಳಕೆದಾರರ ವೇದಿಕೆ(ರಿ), ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಹಕರ ಸುರಕ್ಷತೆಯ ಕಾಯ್ದೆಯ ಪ್ರಕಾರ ಗ್ರಾಹಕರಾಗಿ ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿಸುವಾಗ ಅದರ ಗುಣಮಟ್ಟ, ಸುರಕ್ಷತೆ, ವಸ್ತುವಿನ ಉತ್ಪಾದನೆ ಮತ್ತು ಅದರ ಕೊನೆಯ ದಿನಾಂಕವನ್ನು ಪರಿಶೀಲಿಸಿ, ಖರೀದಿಸಬೇಕು ಎಂದ ಅವರು, ಇ-ಕಾಮರ್ಸ್ ಮತ್ತು ಆನ್ಲೈನ್ ಮೂಲಕ ಸೇವೆ ಪಡೆಯುವ ಸಂದರ್ಭದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಿ, ಸಂಪೂರ್ಣ ಮಾಹಿತಿಯೊಂದಿಗೆ ವ್ಯವಹರಿಸಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್. ಯೋಗೀಶ್ ಮಾತನಾಡಿ, ಗ್ರಾಹಕರ ರಕ್ಷಣಾ ಕಾಯಿದೆಯನ್ನು 1986 ರಲ್ಲಿ ಜಾರಿಗೆ ತರಲಾಗಿದೆ. ಈ ಹಿಂದೆ ವಸ್ತುಗಳನ್ನು ನೇರವಾಗಿ ಹಣ ಪಾವತಿಸಿ ಖರೀದಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಮೂಲಕ ವಸ್ತುಗಳ ಖರೀದಿ ಹಾಗೂ ಸೇವೆಯನ್ನು ಪಡೆಯುತ್ತಿದ್ದೇವೆ. ಹೊಸ ಸವಲತ್ತುಗಳೊಂದಿಗೆ ಹೊಸ ಸಮಸ್ಯೆಗಳು ಉದ್ಭವಿಸಿದ್ದರಿಂದ ಕೆಲವು ಬದಲಾವಣೆಗಳೊಂದಿಗೆ ಗ್ರಾಹಕರ ರಕ್ಷಣೆಗೆ 2019 ರಲ್ಲಿ ಹೊಸ ಕಾಯ್ದೆ ಜಾರಿ ಮಾಡಲಾಯಿತು ಎಂದರು.
ಗ್ರಾಹಕ ತನ್ನ ಸೇವೆಯಿಂದ ವಂಚಿತನಾಗುತ್ತಿದ್ದಾನೆ ಎಂದು ಭಾವಿಸಿದಾಗ ತ್ವರಿತ ನ್ಯಾಯ ಪಡೆಯಲು ಮನೆಯಲ್ಲಿ ಕುಳಿತು ಆನ್ಲೈನ್ ಮೂಲಕ ಅಥವಾ ಬಳಕೆದಾರರ ವೇದಿಕೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಇದರಿಂದ ಕಡಿಮೆ ಶುಲ್ಕ ಪಾವತಿಸುವುದರೊಂದಿಗೆ ಶೀಘ್ರವಾಗಿ ಅಂತಿಮ ತೀರ್ಮಾನ ದೊರಕಿಸಿಕೊಡುವಲ್ಲಿ ಬಳಕೆದಾರರ ವೇದಿಕೆಯು ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಹಾಗೂ ಬಳಕೆದಾರರ ವೇದಿಕೆಯ ಮಾಜಿ ಸಂಚಾಲಕ ಎ.ಪಿ.ಕೊಡಂಚ ಉಪನ್ಯಾಸ ನೀಡಿ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಮಾರುಕಟ್ಟೆಯ ವ್ಯವಹಾರಗಳು ಬದಲಾಗುತ್ತಿದ್ದು, ಗ್ರಾಹಕರಲ್ಲಿ ನಿರಂತರ ಜಾಗೃತಿ ಅವಶ್ಯಕವಾಗಿದೆ. ಗ್ರಾಹಕರು ಕಾನೂನನ್ನು ಸಮರ್ಪಕವಾಗಿ ಬಳಕೆಮಾಡಿಕೊಂಡಾಗ ಮಾತ್ರ ಅದರ ಶಕ್ತಿ ನಮ್ಮ ಅರಿವಿಗೆ ಬರುತ್ತದೆ. ಆದ್ದರಿಂದ ಗ್ರಾಹಕ ಕಾಯಿದೆಗಳ ಕುರಿತ ಮಾಹಿತಿಯನ್ನು ಪ್ರತಿಯೊಬ್ಬರು ಹೊಂದಿರಬೇಕು ಎಂದರು.
ಎಸ್.ಎಮ್.ಎಸ್.ಪಿ ಸಂಸ್ಕೃತ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಸತ್ಯನಾರಾಯಣ ಪಿ ರಾವ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತೆಂಕಪೇಟೆ ವಾರ್ಡ್ನ ನಗರಸಭೆ ಸದಸ್ಯೆ ಮಾನಸ.ಸಿ.ಪೈ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಸುನಿಲ.ತಿ. ಮಾಸರಡ್ಡಿ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಸುಜಾತಾ ಬಿ, ಬಳಕೆದಾರರ ವೇದಿಕೆಯ ಸಂಚಾಲಕ ಯು.ಜಿ ಕಾಮತ್, ಕಾನೂನು ಮಾಪನ ಶಾಸ್ತç ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ವಿ.ಎಡ್ಕೆ, ಎಸ್.ಎಮ್.ಎಸ್.ಪಿ ಸಂಸ್ಕೃತ ಅಧ್ಯಯನ ಕೇಂದ್ರದ ಅಧ್ಯಾಪಕರುಗಳು, ಸಿಬ್ಬಂದಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಆಹಾರ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ ಸ್ವಾಗತಿಸಿ, ಬಳಕೆಯ ವೇದಿಕೆಯ ಹರಿಕೃಷ್ಣ ಶಿವತ್ತಾಯ ನಿರೂಪಿಸಿ, ವಂದಿಸಿದರು.