ಉಡುಪಿ: ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷಾ ಕಾರ್ಯವನ್ನು ಗಣತಿದಾರರು ವೈಜ್ಞಾನಿಕ ಹಾಗೂ ಸಮರ್ಪಕವಾಗಿ ನಿರ್ವಹಿಸುವುದರೊಂದಿಗೆ ಯಾರೊಬ್ಬರೂ ಕೂಡ ಸಮೀಕ್ಷೆಯಿಂದ ಬಿಟ್ಟುಹೋಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.
ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ,ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಇವರ ಸಹಯೋಗದಲ್ಲಿ ಪರಿಶಿಷ್ಟ ಜಾತಿ/ಉಪಜಾತಿ ಸಮಗ್ರ ಸಮೀಕ್ಷೆಗೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಮಾಸ್ಟರ್ ಟ್ರೈನರ್‌ಗಳಿಗೆ ಆಯೋಜಿಸಲಾದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು.
ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತಂತೆ ನ್ಯಾಯಮೂರ್ತಿ ಹೆಚ್.ಎನ್, ನಾಗಮೋಹನದಾಸ್ ಏಕಸದಸ್ಯ ವಿಚಾರಣಾಆಯೋಗದಿಂದ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಮೀಕ್ಷೆ ನಡೆಸುವ ಸಂಬಂಧ ಮೊಬೈಲ್ ಆಪ್ ಮೂಲಕ ಜಿಲ್ಲೆಯಲ್ಲಿ ಮೂರು ಹಂತಗಳಲ್ಲಿ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ತಾಲೂಕು ಮಟ್ಟದ ಮಾಸ್ಟರ್ ಟ್ರೈನರ್‌ಗಳಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರುಗಳಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ.ತರಬೇತಿ ಪಡೆದ ಗಣತಿದಾರರು ನಿಗಧಿತ ಅವಧಿಯಲ್ಲಿ ನಿಖರ ಮಾಹಿತಿಯನ್ನು ಕಲೆ ಹಾಕಬೇಕು ಎಂದರು.
ವಿಭಿನ್ನ ಸ್ಥಳಗಳಲ್ಲಿ ವಾಸವಾಗಿರುವ, ವಿವಿಧ ವೃತ್ತಿಗಳಲ್ಲಿ ತೊಡಗಿರುವ ವ್ಯಕ್ತಿಗಳು ಹಾಗೂ ಜನ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಹಾಗೂ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವುದರೊಂದಿಗೆ ಭವಿಷ್ಯದಲ್ಲಿ ಸರಕಾರದ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಲು ಈ ಸಮೀಕ್ಷೆಯು ಅನುಕೂಲಕರವಾಗಲಿದ್ದು, ಮನೆ ಮನೆ ಭೇಟಿ ನೀಡುವ ಶಿಕ್ಷಕರುಗಳಿಗೆ ಪರಿಶಿಷ್ಟ ಜಾತಿಯ ಸಮುದಾಯದವರು ಮಾಹಿತಿ ನೀಡುವ ಮೂಲಕ ಅಗತ್ಯ ಸಹಕಾರ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಮೇ 5 ರಿಂದ ಮೂರು ಹಂತಗಳಲ್ಲಿ ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಸಂಗ್ರಹಿಸುವ ಸಮೀಕ್ಷಾ ಕಾರ್ಯವು ನಡೆಯಲಿದ್ದು, ಮೊದಲನೇ ಹಂತದಲ್ಲಿ ಮೇ 5 ರಿಂದ 17 ರ ವರೆಗೆ ಸಮೀಕ್ಷಾದಾರರು ಮನೆ ಮನೆ ಭೇಟಿ ನೀಡಲಿದ್ದಾರೆ.ಎರಡನೇ ಹಂತದಲ್ಲಿ ಮೇ 19 ರಿಂದ 21 ರ ವರೆಗೆ ವಿಶೇಷ ಶಿಬಿರಗಳನ್ನು ಕೈಗೊಳ್ಳುವ ಮೂಲಕ ಮನೆ ಮನೆ ಭೇಟಿಯ ಅವಧಿಯಲ್ಲಿ ಬಿಟ್ಟುಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದ ಅವರು, ಅವರು ಮೂರನೇ ಹಂತದಲ್ಲಿ ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಒಂದೊAದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 200 ರಿಂದ 250
ಗಣತಿದಾರರ ಅವಶ್ಯವಿದ್ದು, ಇದಕ್ಕಾಗಿ ಒಟ್ಟು 1112 ಜನ ಶಿಕ್ಷಕರುಗಳಿಗೆ ತರಬೇತಿ ನೀಡಿ, ದತ್ತಾಂಶ ಸಂಗ್ರಹ ಕಾರ್ಯಕ್ಕೆ
ನೇಮಿಸಲಾಗುತ್ತಿದೆ ಎಂದ ಅವರು, ತರಬೇತಿ ಪಡೆದ ಮಾಸ್ಟರ್ ಟ್ರೈನರ್‌ಗಳು ಮೂಲ ಜಾತಿಯನ್ನು ಸಮೀಕ್ಷೆಯಲ್ಲಿ ಸೇರಿಸಲು ಹೆಚ್ಚು ಒತ್ತು ನೀಡಬೇಕು ಎಂದ ಅವರು, ಪ್ರತೀ 10 ರಿಂದ 12 ಸಮೀಕ್ಷೆದಾರರಿಗೆ ಓರ್ವ ಮೇಲ್ವಿಚಾರಕರನ್ನು ನೇಮಿಸಲಾಗುವುದು ಎಂದರು.
ಮತದಾರರ ಪಟ್ಟಿಯಲ್ಲಿನ ಮನೆಗಳ ಆಧಾರದ ಮೇಲೆ ಸಮೀಕ್ಷೆಯನ್ನು ಪ್ರಾರಂಭಿಸಬೇಕು. ಸಮೀಕ್ಷೆದಾರರು ಮೊಬೈಲ್ ಆಪ್ ಅನ್ನು ಬಳಕೆ ಮಾಡುವುದರೊಂದಿಗೆ ಸಮೀಕ್ಷೆಯ ಅಪ್ಲಿಕೇಷನ್ ಗೆ ಲಾಗಿನ್ ಆಗಿ ಮೊಬೈಲ್ ಸಂಖ್ಯೆಗೆ ಸ್ವೀಕೃತವಾಗುವ ಒ.ಟಿ.ಪಿ ಯನ್ನು ನಮೂದಿಸಿ, 42 ವಿವಿಧ ಮಾಹಿತಿಗಳನ್ನು, ಕುಟುಂಬ ಸದಸ್ಯರ ಸ್ವಯಂ ಘೋಷಿತ ವಿವರಗಳನ್ನು ದಾಖಲಿಸಬೇಕು ಎಂದರು.
ಪರಿಶಿಷ್ಟ ಜಾತಿಯಲ್ಲಿ 101 ಉಪಜಾತಿಗಳಿವೆ. ಇವೆಲ್ಲವೂಗಳನ್ನು ಸಮೀಕ್ಷೆಯ ಅಡಿಯಲ್ಲಿ ತರಬೇಕು ಎಂಬ ನಿಟ್ಟಿನಲ್ಲಿ ಶಿಕ್ಷಕರುಗಳನ್ನು ದತ್ತಾಂಶ ಸಂಗ್ರಹ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಧ್ಯಯನವನ್ನೂ ಸಹ ಸಮೀಕ್ಷೆಯಲ್ಲಿ ಮಾಡಲಾಗುವುದು ಎಂದರು.
ಕಾರ್ಯಾಗಾರದಲ್ಲಿ ಸಹಾಯಕ ಕಮೀಷನರ್ ರಶ್ಮಿ ಎಸ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ, ತರಬೇತಿಗೆ ನಿಯೋಜಿಸಲಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಡಯಟ್ ಉಪಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.












