ಉಡುಪಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಗೃಹ ಆರೋಗ್ಯ ಯೋಜನೆಗೆ ಈಗಾಗಲೇ ಕೋಲಾರ ಜಿಲ್ಲೆಯಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, 2025 ರ ಜನವರಿ ಯಿಂದ ಉಡುಪಿ ಜಿಲ್ಲೆಯಲ್ಲಿಯೂ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಜನಸಾಮಾನ್ಯರಲ್ಲಿ ಹೆಚ್ಚುತ್ತಿರುವ ರಕ್ತದೊತ್ತಡ, ಮಧುಮೇಹ ಮುಂತಾದ ಪ್ರಮುಖ ಅಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಹಾಗೂ ಇವುಗಳ ಸಂಭವನೀಯತೆಯನ್ನು ಪರಿಹರಿಸುವುದು ಈ ಯೋಜನೆಯ ಪ್ರಾಥಮಿಕ ಉದ್ದೇಶವಾಗಿದೆ.
ಗೃಹ ಆರೋಗ್ಯ ಯೋಜನೆಯ ಪ್ರಮುಖ ಅಂಶಗಳು : ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಭೇಟಿ ನೀಡಿ, ಪ್ರಮುಖ 6 ಅಸಾಂಕ್ರಾಮಿಕ ಕಾಯಿಲೆಗಳಿಗೆ ಪ್ರಾಥಮಿಕ ಹಂತದ ತಪಾಸಣೆ, ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಹಾಗೂ ಮಾನಸಿಕ ರೋಗಗಳಿಗೆ ಪ್ರಾಥಮಿಕ ಹಂತದ ತಪಾಸಣೆ ನಡೆಸಲಿದ್ದಾರೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ (ಬಿ.ಪಿ) ಗೆ ಉಚಿತ ಔಷಧಿ ವಿತರಿಸಲಿದ್ದಾರೆ. ನಿದ್ರೆಯಲ್ಲಿ ಉಸಿರು ಕಟ್ಟುವಿಕೆ, ಬಿ.ಎಂ.ಐ ಅಸಮತೋಲನ, ಧೂಮಪಾನ ಮತ್ತು ಆಪ್ತ ಸಮಾಲೋಚನೆ ನಡೆಸಲಿದ್ದು, ಸಾರ್ವಜನಿಕರು ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಮನೆ ಭೇಟಿಯ ಸಂದರ್ಭದಲ್ಲಿ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಪೂರ್ಣ ಸಹಕಾರ ನೀಡಬೇಕು.
ಹ್ಯೂಮನ್ ಮೆಟಾ ನ್ಯೂಮೋ ವೈರಸ್: ಹ್ಯೂಮನ್ ಮಟಾ ನ್ಯೂಮೋ ವೈರಸ್ (ಹೆಚ್.ಎಂ.ಪಿ.ವಿ) ಚೀನಾದಲ್ಲಿ ಹರಡುತ್ತಿದೆ ಎಂದು ವರದಿಯಾಗುತ್ತಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಇದು ಇತರೇ ಸಾಮಾನ್ಯ ರೆಸ್ಪಿರೇಟರಿ ವೈರಸ್ ಅನ್ನು ಹೋಲುವ ಸಾಂಕ್ರಾಮಿಕ ರೋಗವಾಗಿದ್ದು, ಫ್ಲೂ (ಶೀತ, ಜ್ವರ, ಕೆಮ್ಮು) ನಂತಹ ರೋಗ ಲಕ್ಷಣಗಳನ್ನು ಹೊಂದಿದೆ. ಪ್ರಸ್ತುತ ಚಳಿಗಾಲವಾಗಿರುವುದರಿಂದ ಈ ಸೋಂಕು ಚಿಕ್ಕ ಮಕ್ಕಳಲ್ಲಿ ಹಾಗೂ ವಯೋ ವೃದ್ಧರಲ್ಲಿ ಕಂಡು ಬರುವ ಸಾಧ್ಯತೆ ಇರುತ್ತದೆ. ರೋಗ ಲಕ್ಷಣಗಳು ಕಂಡುಬAದಲ್ಲಿ ಮಾಸ್ಕ್ ಧಾರಣೆ, ಕೈಗಳ ಶುಚಿತ್ವ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೂಡಲೇ ಸಮೀಪದ ಆಸ್ಪತ್ರೆಗಳಿಗೆ ಭೇಟಿ ನೀಡಿ, ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ. ಈ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿರುವುದರಿಂದ ಸಾರ್ವಜನಿಕರು ಗಾಬರಿ ಪಡದಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.