ಉಡುಪಿ:ನಿಟ್ಟೂರು ಪ್ರೌಢಶಾಲೆಯ ನಿವೃತ್ತ ಅಧ್ಯಾಪಕರೂ, ಯಕ್ಷಗಾನ ಕಲಾರಂಗದ ಜೊತೆ ಕಾರ್ಯದರ್ಶಿಯೂ ಆದ ಎಚ್. ಎನ್. ಶೃಂಗೇಶ್ವರ (63) ಶುಕ್ರವಾರ ಮುಂಜಾನೆ ಅಲ್ಪಕಾಲದ ಅಸೌಖ್ಯ ದಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಕೊಪ್ಪ ತಾಲೂಕಿನ ಮೇಗೂರಿನವರಾದ ಶೃಂಗೇಶ್ವರ್, ಬಾಲ್ಯದಲ್ಲಿ ಉಡುಪಿಗೆ ಬಂದು ಇಲ್ಲಿಯೆ ಬದುಕು ಕಟ್ಟಿಕೊಂಡವರು. ಪದವಿಯ ಬಳಿಕ ತಿರುಪತಿಯಲ್ಲಿ ಬಿಎಡ್ ಪದವಿ ಪಡೆದು ನಿಟ್ಟೂರು ಪ್ರೌಢ ಶಾಲೆಯಲ್ಲಿ ಸಂಸ್ಕೃತ- ಕನ್ನಡ ಅಧ್ಯಾಪಕರಾಗಿ ಮೂರು ದಶಕಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿ ಮೂರು ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಅವರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಅಧ್ಯಾಪನದೊಂದಿಗೆ ಅವರು ಯಕ್ಷಗಾನ ಕಲಾರಂಗ, ಕೃಷ್ಣಮಠ, ಅಷ್ಟಮಠ ಹಾಗೂ ಸಂಸ್ಕೃತ ಪ್ರಸಾರ ದಲ್ಲಿ ಸದ್ದಿಲ್ಲದೇ ಸಾಮಾನ್ಯ ಕಾರ್ಯಕರ್ತರಂತೆ ವಿವಿಧ ಜವಾಬ್ದಾರಿ ನಿರ್ವಹಿಸಿದ್ದರು. ನಿವೃತ್ತಿಯ ಬಳಿಕ ಪೇಜಾವರ ಮಠದ ಗುಂಡಿಬೈಲು ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಅರೆಕಾಲಿಕ ಸಂಸ್ಕತ ಅಧ್ಯಾಪಕ ರಾಗಿ ಸೇವೆ ಸಲ್ಲಿಸುತ್ತಿದ್ದರು. ಪೇಜಾವರ ಮಠದ ವೈದ್ಯಕೀಯ ಸಮಿತಿಯ ಸದಸ್ಯರಾಗಿ ಮೂರು ದಶಕ ಗಳಿಂದ ತೊಡಗಿಸಿಕೊಂಡಿದ್ದರು. ಕಾಣಿಯೂರು ಮಠದ ವಿದ್ಯಾಸಮುದ್ರತೀರ್ಥ ಟ್ರಸ್ಟ್ನಲ್ಲಿಯು ಕಾರ್ಯ ನಿರ್ವಹಿಸಿದ್ದರು.
ಶೃಂಗೇಶ್ವರ್ ಕಲಾರಂಗದ ಜೊತೆ ಕಾರ್ಯದರ್ಶಿಯಾಗಿ ಮಹತ್ತರ ಸೇವೆ ಸಲ್ಲಿಸಿದ್ದರು. ‘ಯಕ್ಷಶಿಕ್ಷಣ ಟ್ರಸ್ಟ್’ನ ಕೋಶಾಧಿಕಾರಿಯಾಗಿ ಅವರ ಕೊಡುಗೆ ಗಮನಾರ್ಹ.
ಸಂತಾಪ: ಉಡುಪಿಯ ಪ್ರಮುಖ ಸಾಮಾಜಿಕ ಕಾರ್ಯಕರ್ತನ ನಿಧನಕ್ಕೆ ಪೇಜಾವರ ಮಠದ ದಿವಾನ ರಾದ ರಘುರಾಮ ಆಚಾರ್ಯ, ಮಾಜಿ ಶಾಸಕ ಕೆ. ರಘುಪತಿ ಭಟ್, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಕರ್ನಾಟಕ ಯಕ್ಷಗಾನ ಅಕಾಡೆುಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಯಕ್ಷಗಾನ ಕಲಾರಂಗದ ನಿಕಟಪೂರ್ವ ಅಧ್ಯಕ್ಷ ಕೆ.ಗಣೇಶ್ ರಾವ್, ಉಪಾಧ್ಯಕ್ಷರಾದ ಎಸ್.ವಿ.ಭಟ್, ಪಿ. ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ, ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.












