ಇವರು ಅಭಿವೃದ್ಧಿಯ ನವಸೃಷ್ಟಿಕರ್ತರು! :ಇಂಜಿನಿಯರ್ಸ್ ದಿನದ ಶುಭಾಶಯಗಳು

ಇಂಜಿನಿಯರ್ಸ್ ಗಳೆಂದರೆ ಸದಾ ಹೊಸತನವನ್ನು ಸೃಷ್ಟಿ ಮಾಡುವವರು, ದೇಶದ ಅಭಿವೃದ್ದಿಗೆ ಹೆಗಲಾಗುವವರಿ. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಮತ್ತು ಆರ್ಥಿಕವಾಗಿ ಸದೃಢವನ್ನಾಗಿಸಲು ನೆರವಾಗುವ ಎಂಜಿನಿಯರ್‌ಗಳ ಸೇವೆಯನ್ನು ಸ್ಮರಿಸುವ, ತನ್ಮೂಲಕ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ `ಇಂಜಿನಿಯರ್‌ಗಳ ದಿನ’ವನ್ನು ಆಚರಿಸಲಾಗುತ್ತದೆ. ಇಂದು ಸೆಪ್ಟೆಂಬರ್ 15 ಇಂಜಿನಿಯರ್‌ಗಳ ದಿನ.

ಆಚರಣೆ ಹಿನ್ನೆಲೆ ಬಗ್ಗೆ ಒಂದಷ್ಟು:

ಇಂಜಿನಿಯರ್ ದಿನದ ಆಚರಣೆಯ ಹಿನ್ನಲೆ ವಿಶೇಷವಾಗಿದೆ. ಸರ್ ಎಂ ವಿಶ್ವೇಶ್ವರಯ್ಯ. ನಮ್ಮ ನೆಲದ ಸಾಕ್ಷಿಪ್ರಜ್ಞೆ. ಭಾರತದ ಕಂಡ ಅಪ್ರತಿಮ ಇಂಜಿನಿಯರ್. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1860 ಸೆಪ್ಟೆಂಬರ್‌ 15ರಂದು ಜನಿಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸಾಧನೆ ಅಮೋಘ.ಇದೇ ಕಾರಣಕ್ಕೆ ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆಪ್ಟಂಬರ್‌ 15ರಂದು ಪ್ರತಿವರ್ಷ ಭಾರತದಲ್ಲಿ `ಇಂಜಿನಿಯರ್‌ಗಳ ದಿನ’ ಎಂದು ಆಚರಿಸಲಾಗುತ್ತದೆ.

ಜೀವನದಿ ಕಾವೇರಿಗೆ ಅಡ್ಡಲಾಗಿ ಮಂಡ್ಯ ಜಿಲ್ಲೆಯಲ್ಲಿ ಕಟ್ಟಲಾದ ಕೃಷ್ಣರಾಜ ಸಾಗರ ಅಣೆಕಟ್ಟು ಇವರ ಶ್ರಮದ ಫಲ. ಮೈಸೂರಿನ ನಾಲ್ಕನೇ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲದಲ್ಲಿ ದಿವಾನರಾಗಿದ್ದ ವಿಶ್ವೇಶ್ವಯ್ಯನವರು ದೂರದೃಷ್ಟಿಯುಳ್ಳ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದರು. ಮೈಸೂರು ಸ್ಯಾಂಡಲ್ ಸೋಪ್, ಜೋಗದ ಶರಾವತಿ ವಿದ್ಯುತ್ ಯೋಜನೆ, ಭದ್ರವತಿ ಉಕ್ಕಿನ ಕಾರ್ಖಾನೆ ಹೀಗೆ ಪಟ್ಟಿ ದೊಡ್ಡದಿದೆ.

ಕರಾವಳಿಯಲ್ಲೂ ಇದ್ದಾರೆ ಆದರ್ಶ ಇಂಜಿನಿಯರ್ಸ್ :

ಸರ್ ಎಂ ವಿಶ್ವೇಶ್ವರಯ್ಯ ಅವರ ವ್ಯಕ್ತಿತ್ವ ಎಲ್ಲರಿಗೂ ಆದರ್ಶ. ಬರೀ ಇಂಜಿನಿಯರಿಂಗ್ ಕ್ಷೇತ್ರದಲ್ಲಷ್ಟೇ ಅಲ್ಲ, ಆಡಳಿತಾತ್ಮಕ ವಿಷಯಗಳಲ್ಲಿಯೂ ವಿಶ್ವೇಶ್ವರಯ್ಯ ಅವರು ಮೇರು ಪರ್ವತ ಅವರ ಸಾಧನೆ, ಜೀವನಗಾಥೆ, ಸಾಹಸ ಮನೋಭಾವವನ್ನು ಸ್ಪೂರ್ತಿಯಾಗಿ ಪಡೆದುಕೊಂಡು ಆ ದಾರಿಯಲ್ಲಿ ನಡೆದು ಅದೆಷ್ಟೋ ಮಂದಿ ಇಂಜಿನಿಯರ್ ಗಳು ಜೀವನದಲ್ಲಿ ಯಶಸ್ಸು ಕಂಡಿದ್ದಾರೆ. ಕರಾವಳಿಯ ಜಿಲ್ಲೆಯ ಇಂಜಿನಿಯರ್ ಗಳು ಎಲ್ಲೆಡೆ ಮಾದರಿಯಾಗಿದ್ದಾರೆ.

ಭಾರತ ರತ್ನ ವಿಶ್ವೇಶ್ವರಯ್ಯನವರ ಸಾಧನೆ ಮೆಚ್ಚಿ ಇವರಿಗೆ ಹಲವಾರು ಪ್ರ ಶಸ್ತಿಗಳು ಲಭಿಸಿವೆ. ಬ್ರಿಟಿಷ್ ಸರಕಾರ ಇವರಿಗೆ ನೈಟ್‌ಹುಡ್ ನೀಡಿ ಗೌರವಿಸಿತು. 1955ರಲ್ಲಿ ಭಾರತ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ನೀಡಿ ಗೌರವಿಸಿತು. ತುಂಬು ಜೀವನ ನಡೆಸಿದ ಇವರು ಶತಾಯುಷಿಗಳಾಗಿ 1962 ನೇ ಎಪ್ರಿಲ್‌ 12 ಕ್ಕೆ ವಿಧಿವಶರಾದರು.

ಪ್ರೀತಿಯ ಇಂಜಿನಿಯರ್‌ಗಳಿಗೆ ಇಂಜಿನಿಯರ್ಸ್ ಡೇ ಶುಭಾಶಯಗಳು:

ಪರಿಶ್ರಮ ಮತ್ತು ಕ್ರಿಯಾಶೀಲತೆಗೆ ಮತ್ತೊಂದು ಹೆಸರೇ ಇಂಜಿನಿಯರಿಂಗ್. ಸೃಜನಶೀಲ, ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಲು ವಿಜ್ಞಾನವನ್ನು ಸಮರ್ಥವಾಗಿ ಬಳಸುವುದೇ ಇಂಜಿನಿಯರಿಂಗ್.

ದೇಶಕ್ಕೆ, ದೇಶದ ಪ್ರಮುಖ ಯೋಜನೆಗಳಿಗೆ ಭದ್ರ ಬುನಾದಿ ಹಾಕುವಲ್ಲಿ ಇಂಜಿನಿಯರ್‌ಗಳ ಪಾತ್ರ ಪ್ರಮುಖವಾದದ್ದು. ಇಂಜಿನಿಯರ್‌ಗ ಳ ಕ್ರಿಯಾಶೀಲತೆ, ಬುದ್ಧಿವಂತಿಕೆ ದೇಶ, ನಗರ ಒಂದು ಸಂಸ್ಥೆಯನ್ನು ಆರ್ಥಿಕವಾಗಿ ಅಭಿವೃದ್ಧಿಗೆ ಕೊಂಡೊಯ್ಯುತ್ತದೆ.

ವಿಶ್ವೇಶ್ವರಯ್ಯನಂಥ ಮತ್ತಷ್ಟು ಕೊಡುಗೆಗಳನ್ನು ಇಂಜಿನಿಯರ್‌ಗಳು ನೀಡುವಂತಾಗಲಿ ಅಲ್ಲವೇ? ಪರಿಶ್ರಮ, ದೃಢ ನಿರ್ಧಾರದಿಂದ, ಪ್ರಾಮಾಣಿಕವಾಗಿ ದೇಶದ ಅಭಿವೃದ್ಧಿಗೆ ದುಡಿಯುವ ಎಲ್ಲಾ ಇಂಜಿನಿಯರ್‌ಗಳಿಗೂ ಇಂಜಿನಿಯರ್ಸ್ ದಿನದ ಶುಭಾಶಯಗಳು.