ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ: ಪ್ರತಿಭಟನೆ ಹಾಗೂ ಏಪ್ರಿಲ್ ಫೂಲ್ ದಿನಾಚರಣೆ – ಪ್ರಚಾರ ಸ್ಟಿಕ್ಕರ್ ಬಿಡುಗಡೆ

ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಇವರ ನೇತೃತ್ವದಲ್ಲಿ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬವನ್ನು ಖಂಡಿಸಿ ಏಪ್ರಿಲ್ 1 ಮಂಗಳವಾರದಂದು ಮದ್ಯಾಹ್ನ ಕಲ್ಸಂಕದಿಂದ ಇಂದ್ರಾಳಿಯ ತನಕ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಏಪ್ರಿಲ್ ಫೂಲ್ ದಿನಾಚರಣೆ ನಡೆಯಲಿದ್ದು ಈ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಏಪ್ರಿಲ್ ಫೂಲ್ ದಿನಾಚರಣೆಯ ಪ್ರಚಾರದ ಅಂಗವಾಗಿ ಸ್ಟಿಕರ್ ಬಿಡುಗಡೆ ಕಾರ್ಯಕ್ರಮವು ಇಂದ್ರಾಳಿಯಲ್ಲಿ ಮಂಗಳವಾರ ಕಾರಿಗೆ ಸ್ಟಿಕರ್ ಅಂಟಿಸುವುದರ ಮೂಲಕ ಚಾಲನೆ ನೀಡಲಾಯಿತು.

ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಜನರ ಹೋರಾಟ, ಪ್ರತಿಭಟನೆಗೆ ಒಂದು ತಾರ್ಕಿಕ ಅಂತ್ಯ ನೀಡಲು ನಿರ್ಧರಿಸಿದ್ದು, ಮಾಡು-ಮಡಿ ರೀತಿಯ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಅಮೃತ ಶೆಣೈ ತಿಳಿಸಿದರು. ಎಪ್ರಿಲ್ 1ರಂದು ಕಾಮಗಾರಿ ನಡೆಯುವ ಸ್ಥಳದಲ್ಲಿ ನಮ್ಮ ಬೃಹತ್ ಪ್ರತಿಭಟನೆ ನಡೆಯಲಿದೆ. ಇದಕ್ಕೆ ಮುನ್ನ ಕಲ್ಸಂಕದಿಂದ ಇಂದ್ರಾಳಿಯವರೆಗೆ 5ರಿಂದ 6 ಸಾವಿರ ಮಂದಿ ಭಾಗವಹಿ ಸುವ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಇದರೊಂದಿಗೆ ಇಂದ್ರಾಳಿಯಲ್ಲಿ ಜಿಲ್ಲೆಯ ಸಂಸದರು, ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಜಿಲ್ಲೆಯ ಜನರನ್ನು ನಿರಂತರವಾಗಿ ಮೂರ್ಖರನ್ನಾಗಿಸು ತ್ತಿರುವುದನ್ನು ಜನತೆಗೆ ವಿವರಿಸಲು ಎಪ್ರಿಲ್ ಫೂಲ್ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಲಾಗಿದೆ.

ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಅವರಂತೆ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾದ ಬಳಿಕ ಸಮಸ್ಯೆಯನ್ನು ಬಗೆಹರಿಸುವ ಬದಲು ಒಂದರ ನಂತರ ಒಂದರಂತೆ ದಿನಾಂಕವನ್ನು ನೀಡುತ್ತಾ ಹೋಗುತಿದ್ದಾರೆ. ಡಿಸೆಂಬರ್ ಕೊನೆ, ಜನವರಿ ಕೊನೆ, ಮಾರ್ಚ್ ಕೊನೆಯ ಗಡುವನ್ನು ಅವರು ನೀಡುತ್ತಾ ಹೋಗುತಿದ್ದಾರೆ. ಜನ ಮೂರ್ಖರಾಗುವುದು ಬಿಟ್ಟು, ಕಾಮಗಾರಿ ಮುಗಿಯುವ ಯಾವ ಸೂಚನೆಗಳೂ ಇಲ್ಲಿ ಸಿಗುವುದಿಲ್ಲ. ಹೀಗಾಗಿ ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ್ದೇವೆ ಎಂದು ಸಂಘಟಕರು ತಿಳಿಸಿದ್ದಾರೆ.

ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷರಾದ ಕೀರ್ತಿ ಶೆಟ್ಟಿ ಅಂಬಲಪಾಡಿ, ಪ್ರಧಾನ ಸಂಚಾಲಕರಾದ ಅಮೃತ್ ಶೆಣೈ, ಕರ್ಜೆ ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಕರ್ಜೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಮಹಾಬಲ ಕುಂದರ್, ಸದಸ್ಯರಾದ ಚಾರ್ಲ್ಸ್ ಅಂಬ್ಲರ್, ರಹಿಮಾನ್, ಅನ್ಸಾರ್ ಅಹಮ್ಮದ್, ಬಾಲಕೃಷ್ಣ ಶೆಟ್ಟಿ ಭರತ್ ಕುಮಾರ್, ಸಾಯಿರಾಜ್, ಸಂಜಯ್ ಆಚಾರ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.