ಆ.29-30ರಂದು ಉಡುಪಿಯಲ್ಲಿ ಭಾರತ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟದ 70 ನೇ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸಭೆ

ಉಡುಪಿ: ಕಟ್ಟಡ ಕಾರ್ಮಿಕರ ಪರಿಸ್ಥಿತಿ, ಈಗಿರುವ ಕಾನೂನುಗಳ ರಕ್ಷಣೆ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿ ಉಳಿಸುವುದು ಹಾಗೂ ಅಲ್ಲಿ ದೊರಕುವ ಸೌಲಭ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಚರ್ಚಿಸಲು ಸಿಡಬ್ಯೂಎಫ್ಐ ( ಭಾರತ ಕಟ್ಟಡ ನಿರ್ಮಾಣ ಕಾರ್ಮಿಕರ ಒಕ್ಕೂಟ) ಇದರ 70 ನೇ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸಭೆ ಇದೇ ಆಗಸ್ಟ್ 29 ಮತ್ತು 30ರಂದು ಉಡುಪಿಯ ಲಿಕೋ ಬ್ಯಾಂಕ್ ನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.

ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡ ಮತ್ತು ಇತರೆ ನಿರ್ಮಾಣ ವಲಯದಲ್ಲಿ 5 ಕೋಟಿ ಗಿಂತ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಸೂಕ್ತ ಸುರಕ್ಷತೆ ಇಲ್ಲದೇ, ಪ್ರತಿನಿತ್ಯ ಹತ್ತಾರು ಕಾರ್ಮಿಕರು ಸಾವನ್ನಪ್ಪುತ್ತಿದ್ದಾರೆ. ಇವರನ್ನು ನಂಬಿದ ಕುಟುಂಬಗಳು ಅನಾಥವಾಗುತ್ತಿದೆ. ಇಂತಹ ಅಂಶಗಳನ್ನು ಪರಿಗಣಿಸಿ, ಸಿಡಬ್ಯೂಎಫ್ಐ ಸಂಘಟನೆ ಅಖಿಲ ಭಾರತ ಮಟ್ಟದಲ್ಲಿ ಕಟ್ಟಡ ಮತ್ತು ಇತರ ಕಾರ್ಮಿಕರನ್ನು ಸಂಘಟಿಸುತ್ತಿದೆ ಎಂದರು.

ಇವರಿಗೆ ಸರಕಾರದಿಂದ ಸೂಕ್ತ ಸವಲತ್ತುಗಳನ್ನು ಸರಕಾರದಿಂದ ಒದಗಿಸುವ ನಿಟ್ಟಿನಲ್ಲಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. 30 ರಾಜ್ಯಗಳಿಂದ ಸುಮಾರು 130 ಮಂದಿ ಮುಖಂಡರು ಭಾಗವಹಿಸಲಿದ್ದಾರೆ. ಆ.28 ರಂದು ಮಹಿಳಾ ಉಪಸಮಿತಿ ಸಭೆ ನಡೆಯಲಿದೆ. 29 ರಂದು ಅಜ್ಜರಕಾಡು ಹುತಾತ್ಮ ಚೌಕದ ಬಳಿ ಸಂಜೆ 4 ಗಂಟೆಗೆ ಬಹಿರಂಗ ಸಭೆ ನಡೆಯಲಿದ್ದು, ಅಖಿಲ ಭಾರತ ಅಧ್ಯಕ್ಷ ಡಾ.ಹೇಮಲತಾ, ಪ್ರಧಾನ ಕಾರ್ಯದರ್ಶಿ ಯು.ಪಿ.ಜೋಸೆಫ್, ಸಿಐಟಿಯು ರಾಜ್ಯ ಪ್ರ.ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಇತರ ನಿರ್ಮಾಣ ಕಾರ್ಮಿಕ ಫೆಡರೇಶನ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಕೆ.ಮಹಂತೇಶ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಶೇಖರ್ ಬಂಗೇರಾ, ಕಾರ್ಯದರ್ಶಿ ಸುಭಾಷ್ ನಾಯಕ್, ಖಜಾಂಚಿ ಶಶಿಧರ ಗೊಲ್ಲ, ಉಪಾಧ್ಯಕ್ಷರಾದ ಸುರೇಶ್ ಕಲ್ಲಾಗರ, ಕವಿರಾಜ್, ದಯಾನಂದ ಉಪಸ್ಥಿತರಿದ್ದರು.