ಮೂಡುಬಿದಿರೆ: ಕಲೆ, ಸಂಸ್ಕೃತಿ, ಕ್ರೀಡೆಯ ಮೂಲಕ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಮೂಡುಬಿದಿರೆ ತಾಲ್ಲೂಕಿನ ಮಿಜಾರಿನ ಪ್ರಕೃತಿಯ ಮಡಿನಲ್ಲಿರುವ ‘ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು’ (ಎಐಇಟಿ) ಸ್ವಾಯತ್ತ ಸ್ಥಾನಮಾನ ಪಡೆದಿದ್ದು, 2034-35ನೇ ಸಾಲಿನ ವರೆಗೆ ಅನ್ವಯಿಸಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವೈಶಿಷ್ಟ್ಯಗಳು:
‘ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ನ್ಯಾಕ್‍ನ ಮೊದಲ ಸೈಕಲ್ ನಲ್ಲೇ A+ ಶ್ರೇಣಿಯನ್ನು ಸಿಜಿಪಿಎ 3.32 (4 ಸ್ಕೇಲ್) ಗ್ರೇಡ್‍ನೊಂದಿಗೆ 16 ಜನವರಿ 2028ರ ವರೆಗೆ ಅನ್ವಯವಾಗುವಂತೆ ಪಡೆದಿದೆ. ನಿರ್ಫ್ ಇನ್ನೋವೇಷನ್ ರ್ಯಾಂಕಿಂಗ್ ಅನ್ನು 150ರಿಂದ 300 ಬ್ಯಾಂಡ್‍ನಲ್ಲಿ ಪಡೆದಿದೆ. ಜೊತೆಯಲ್ಲಿ ಕಾಲೇಜಿನ ಹಲವು ಎಂಜಿನಿಯರಿಂಗ್‍ಗೆ ವಿಭಾಗಗಳು ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆಯನ್ನು ಪಡೆದಿವೆ. ಪ್ರಮುಖ ಸಂಶೋಧನಾ ಸಂಸ್ಥೆಯಾದ ಇಸ್ರೊ ಹಾಗೂ ಇಸ್ರೋದ ಸಹ ಸಂಸ್ಥೆಗಳಾದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ, ಹೈದರಾಬಾದ್, ಪ್ರಾದೇಶಿಕ ದೂರ ಸಂವೇದಿ ಕೇಂದ್ರ, ಬೆಂಗಳೂರು, ರಾಷ್ಟ್ರೀಯ ವಾಯುಮಂಡಲ ಸಂಶೋಧನಾ ಪ್ರಯೋಗಾಲಯಗಳು, ಗಡಂಕಿ, ಆಂಧ್ರಪ್ರದೇಶ, ಎಸ್‍ಸಿಎಲ್ , ಬಾಹ್ಯಾಕಾಶ ವಿಭಾಗ, ಚಂಡೀಗಢ, ಡಿಫೆನ್ಸ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಟೆಕ್ನಾಲಜಿ ಪುಣೆ, ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ವಿಶ್ವವಿದ್ಯಾಲಯಗಳಾದ ಕುಮಾಮೊಟೊ ವಿಶ್ವವಿದ್ಯಾಲಯ, ಜಪಾನ್, ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ, ಅಲಹಾಬಾದ್ ಹಾಗೂ ಏಳು ಯುರೋಪಿಯನ್ ವಿಶ್ವವಿದ್ಯಾಲಯಗಳು ಜೊತೆ ಆಳ್ವಾಸ್ ಮಹತ್ವದ ಒಡಂಬಡಿಕೆ ಮಾಡಿಕೊಂಡಿದೆ. ಇವುಗಳ ಜೊತೆ ಟೊಯೊಟೊ ಕಿರ್ಲೋಸ್ಕರ್ ಮೋಟಾರ್ಸ್, ಬೆಂಗಳೂರು, ಬುಲ್ಲರ್ ಇಂಡಿಯಾ ಕಂಪನಿ, ಬಿಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ ಜೊತೆ ಒಪ್ಪಂದ ಮಾಡಿಕೊಂಡಿದೆ.
ಟಿಸಿಎಸ್ ಐಯಾನ್, ಅಲೆಂಬಿಕ್, ಇಆ್ಯಂಡ್‍ವೈ, ಕೆಸಿಸಿಐ, ಎಚ್‍ಎಎಲ್, ಬಿಇಎಲ್-ಬೆಂಗಳೂರು, ಒರಾಕಲ್ ಅಕಾಡೆಮಿ, ಯುಐಪಾತ್, ಕ್ಯೂ-ಸ್ಪೈಡರ್ಸ್, ಎಜ್ಯುನೆಟ್, ಒಲ್ವೋ, ಸನ್ಸೆರಾ, ಎಸ್ ಮ್ಯಾನುಫೆಕ್ಚರಿಂಗ್ ಸಿಸ್ಟಮ್ಸ್ ಮತ್ತಿತರ ಸಂಸ್ಥೆಗಳ ಜೊತೆ ಇಂಟರ್ನ್ಶಿಪ್, ಪ್ರಾಜೆಕ್ಟ್, ತಾಂತ್ರಿಕ ಚರ್ಚೆ, ಕಾರ್ಯಾಗಾರ, ಕೈಗಾರಿಕಾ ಭೇಟಿ, ಉನ್ನತ ಶಿಕ್ಷಣ ಹಾಗೂ ಬೋಧಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಬೌದ್ಧಿಕ ಆಸ್ತಿ ಹಕ್ಕು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲೂ ಗಣನೀಯ ಸಾಧನೆ ಮೆರೆದಿರುವ ಆಳ್ವಾಸ್, 2024ರಲ್ಲಿ 15 ಪೇಟೆಂಟ್‍ಗಳನ್ನು ಪ್ರಕಟಗೊಳಿಸಿದ್ದು, ಜೊತೆಯಲ್ಲಿ 8 ಪೇಟೆಂಟ್‍ಗಳ ಮಾನ್ಯತೆಗಳಿಸಿರುವುದು ಉಲ್ಲೇಖನೀಯ ಸಾಧನೆಯಾಗಿದೆ. ಅಲ್ಲದೆ ಇಲ್ಲಿನ ಹೆಚ್ಚಿನ ಸಂಶೋಧನಾ ಪ್ರಬಂಧಗಳು ಪೀರ್ ರಿವ್ಯೂಡ್ ಜರ್ನಲ್‍ಗಳಲ್ಲಿ ಪ್ರಕಟಗೊಳ್ಳುತ್ತಿವೆ. 2023-24ನೇ ಸಾಲಿನಲ್ಲಿ ಸರಕಾರಿ ಸಂಶೋಧನಾ ಕೇಂದ್ರಗಳಿಂದ 1.25 ಕೋಟಿ ರೂಪಾಯಿ ಅನುದಾನ ಪಡೆದಿರುವುದು ಸಂಸ್ಥೆಯು ಆವಿಷ್ಕಾರ ಹಾಗೂ ತಂತ್ರಜ್ಞಾನದ ಉನ್ನತೀಕರಣದಲ್ಲಿ ಹೊಂದಿದ ಬದ್ಧತೆಯನ್ನು ತೋರಿಸುತ್ತದೆ. ಇಸ್ರೋದಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ‘ಎಲ್‍ಡಿಎಸ್- ಮಿಂಚು ಪತ್ತೆ ಸಂವೇದಿ ಜಾಲ, ಜಿಎನ್‍ಎಸ್‍ಎಸ್ – ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ಸ್ ಮತ್ತು ಅಟೋಮೆಟಿಕ್ ವೆದರ್ ಸ್ಟೇಷನ್’ ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಸಮಕಾಲೀನ ಸಮಸ್ಯೆಗಳ ಕುರಿತು ಪ್ರಾಜೆಕ್ಟ್ ಮತ್ತು ಇಂಟರ್ನ್ಶಿಪ್ ಮಾಡಲು ಅವಕಾಶ ಕಲ್ಪಿಸಿದೆ.
ಬಹುರಾಷ್ಟ್ರೀಯ ಕಂಪೆನಿಗಳಾದ ಇನ್ಫೋಸಿಸ್, ಸ್ಟೇಲಿಯಂ, ಸ್ಟ್ರೈಕಾನ್, ಬಿಟಾ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ. ಮತ್ತು ರಹ್ಮತ್-ಟೆಕ್, ಇಂಟರ್‍ನ್ಯಾಷನಲ್ ಎಫ್‍ಝಇ ಸಂಸ್ಥೆಗಳ ಘಟಕಗಳು ಕಾಲೇಜಿನ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅತ್ಯುನ್ನತ ಸಾಧನೆ ಮೆರೆದಿರುವ ಇಲ್ಲಿನ ವಿದ್ಯಾರ್ಥಿಗಳು,
ವಿಶ್ವವಿದ್ಯಾಲಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸಿ, ವಿಟಿಯು ವಿವಿಯನ್ನು ದೇಶಿಯ ಮಟ್ಟದಲ್ಲಿ ಮಿಂಚುವಂತೆ ಮಾಡಿದೆ. ಆಳ್ವಾಸ್‍ನಲ್ಲಿ ಜರುಗುವ ಆನ್ ಕ್ಯಾಂಪಸ್, ಆಫ್ ಕ್ಯಾಂಪಸ್, ಪೂಲ್ ಕ್ಯಾಂಪಸ್ ಹಾಗೂ ಪ್ರಗತಿ- ಬೃಹತ್ ಉದ್ಯೋಗ ಮೇಳಗಳು ವಿದ್ಯಾರ್ಥಿಗಳಿಗೆ ಉದ್ಯೋಗದ ಮಹಾಪೂರವನ್ನೆ ಒದಗಿಸಿ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ಪಡೆಯುವಂತೆ ಮಾಡಿವೆ. ವಾರ್ಷಿಕವಾಗಿ ಸರಾಸರಿ 280ಕ್ಕೂ ಅಧಿಕ ಕಂಪೆನಿಗಳು ವಿವಿಧ ಮೋಡ್‍ಗಳಲ್ಲಿ ಕ್ಯಾಂಪಸ್‍ಗೆ ಆಗಮಿಸಿ, 80ಶೇಕಡಾಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕಾಲೇಜಿನ ಆವರಣದಲ್ಲೇ ನೇಮಕಾತಿ ಪ್ರಕ್ರಿಯೆ ನಡೆಸುತ್ತವೆ.
ಸ್ವಾಯತ್ತಾ ಸ್ಥಾನಮಾನದ ಪ್ರಯೋಜನಗಳು:
‘ಸ್ವಾಯತ್ತ’ದಿಂದ ಪ್ರಮುಖವಾಗಿ ‘ಪಠ್ಯಕ್ರಮ ನಮ್ಯತೆ’ (ಪ್ರಸ್ತುತ ಬೇಡಿಕೆಗೆ ಅನುಗುಣವಾದ ಉದ್ಯೋಗಾಧರಿತ ಪಠ್ಯಕ್ರಮ ರೂಪಿಸಲು ಅವಕಾಶ), ನವನವೀನ ಬೋಧನಾ ಕ್ರಮಗಳ ಅಳವಡಿಕೆ, ಶೈಕ್ಷಣಿಕ ಅವಧಿಯನ್ನು ಇನ್ನಷ್ಟು ಕಾಲಬದ್ಧ ಹಾಗೂ ಸುಸಂಘಟಿತವಾಗಿ ನಡೆಸಲು ಅವಕಾಶ, ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆ, ಸಂಶೋಧನಾ ಅವಕಾಶಗಳ ಹೆಚ್ಚಳ, ಒಟ್ಟು ಗುಣಮಟ್ಟದ ಉನ್ನತೀಕರಣ, ಕೈಗಾರಿಕೆಗಳ ಜೊತೆ ಹೆಚ್ಚಿನ ಸಹಯೋಗ, ಉದ್ಯಮಶೀಲತಾ ಬೆಳವಣಿಗೆ, ಜಾಗತಿಕ ಮಾನ್ಯತೆಗೆ ನೆರವು ದೊರೆಯಲಿದೆ.
ಇತ್ತೀಚೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಂಗಳೂರು ವಿವಿ ಅಧೀನದಲ್ಲಿದ್ದ ಆಳ್ವಾಸ್ ಪದವಿ ಕಾಲೇಜು 2023-24ನೇ ಶೈಕ್ಷಣಿಕ ವರ್ಷದಿಂದ ಸ್ವಾಯತ್ತ ಸ್ಥಾನಮಾನ ಪಡೆದುಕೊಂಡಿದೆ. ಮಂಗಳೂರು ವಿವಿಯ ಸಂಯೋಜಿತ ಆಳ್ವಾಸ್ ಪದವಿ ಕಾಲೇಜು ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧೀನದಲ್ಲಿದ್ದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜುಗಳಿಗೆ ಇದೀಗ ಸ್ವಾಯತ್ತಾ ಸ್ಥಾನಮಾನ ಲಭಿಸಿರುವುದು ಮುಂದಿನ ದಿನಗಳಲ್ಲಿ ಈ ಶಿಕ್ಷಣ ಸಂಸ್ಥೆಗಳು ಗುಣಾತ್ಮಕ ಶಿಕ್ಷಣವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನೀಡಲು ಸಹಕಾರಿಯಾಗಲಿದೆ.
ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ ಪೀಟರ್ ಫೆರ್ನಾಂಡೀಸ್, ಅಕಾಡೆಮಿಕ್ಸ್ ಡೀನ್ ಡಾ ದಿವಾಕರ ಶೆಟ್ಟಿ, ರಿಸರ್ಚ್ ಡೀನ್ ಡಾ ರಿಚರ್ಡ ಪಿಂಟೋ ಉಪಸ್ಥಿತರಿದ್ದರು.