ಉಡುಪಿ: ಆದಿಉಡುಪಿಯ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯ ರಸ್ತೆ, ಶೌಚಾಲಯ ಸಹಿತ ವಿವಿಧ ಮೂಲಭೂತ ಸೌಕರ್ಯಗಳ ಕೊರತೆ ವಿರೋಧಿಸಿ ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟ ಸಮಿತಿಯ ನೇತೃತ್ವದಲ್ಲಿ ವರ್ತಕರು ಕಪ್ಪುಪಟ್ಟಿ ಪ್ರದರ್ಶಿಸಿ ಇಂದು ಪ್ರತಿಭಟನೆ ನಡೆಸಿದರು.
ಎಪಿಎಂಸಿ ಮಾರುಕಟ್ಟೆಯ ಅವ್ಯವಸ್ಥೆ ಖಂಡಿಸಿ ಕಳೆದ 11 ದಿನಗಳಿಂದ ವ್ಯಾಪಾರಿಗಳು ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಮೌನ ಪ್ರತಿಭಟನೆ ನಡೆಸುತ್ತಿದ್ದರು. ಯಾವುದೇ ಅಧಿಕಾರಿ ಸ್ಪಂದಿಸದ ಹಿನ್ನೆಲೆಯಲ್ಲಿ ವರ್ತಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಆ ಮಾರ್ಗದ ಮೂಲಕ ಕಚೇರಿಗೆ ಆಗಮಿಸುತ್ತಿದ್ದ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಗೋಪಾಲ ತಿಮ್ಮಣ್ಣ ಕೆ. ಅವರ ಕಾರಿಗೆ ಮುತ್ತಿಗೆ ಹಾಕಿದ ಪ್ರತಿಭಟನಾ ನಿರತ ವರ್ತಕರು, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ನೂರಾರು ಮಂದಿ ವರ್ತಕರು ತಮ್ಮ ಅಂಗಡಿಯ ಮುಂಭಾಗ ಕಳೆದ 11 ದಿನಗಳಿಂದ ಕಪ್ಪುಬಟ್ಟೆ ಪ್ರದರ್ಶಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಇದುವರೆಗೆ ಯಾವೊಬ್ಬ ಅಧಿಕಾರಿಯೂ ಕೇಳಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಇದೇ ಜಾಗದಲ್ಲಿ ಕುಳಿತುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದ ನಮಗೆ ನೋಟಿಸ್ ಕೊಡದೇ ತೆರವು ಮಾಡುವುದಕ್ಕೆ ಮುಂದಾಗಿದ್ದೀರಿ. ಅಧಿಕಾರಿಗಳು ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಬಾರದು. ನಾವೇನು ಈ ಜಾಗವನ್ನು ನಮ್ಮ ಮಕ್ಕಳಿಗೆ ಕೊಡಿ, ಸಂಸಾರಕ್ಕೆ ಕೊಡಿ ಎನ್ನುತ್ತಿಲ್ಲ. ವ್ಯಾಪಾರ ವಹಿವಾಟಿಗೆ ಕೇಳುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವ್ಯಾಪಾರ-ವಹಿವಾಟಿನ ಮೇಲೆ ಮೂಲಭೂತ ಸೌಕರ್ಯಕ್ಕಾಗಿ ಹಣ ತೆಗೆದುಕೊಳ್ಳುತ್ತೀರಿ. ಶೌಚಾಲಯಕ್ಕೆ 5 ರೂ. ತೆಗೆದುಕೊಳ್ಳುತ್ತೀರಿ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಶೌಚಾಲಯ ಮಾತ್ರ ನೋಡುವಂತಿಲ್ಲ. ನೀರು ಬರುತ್ತಿಲ್ಲ. ಇಡೀ ಎಪಿಎಂಸಿ ಗಬ್ಬು ನಾರುತ್ತಿದೆ ಎಂದು ವರ್ತಕರು ಆಕ್ರೋಶ ಹೊರಹಾಕಿದರು.