ಅ. 24ರಿಂದ 26ರ ವರೆಗೆ ಉಡುಪಿ ಶ್ರೀಕೃಷ್ಣಮಠದಲ್ಲಿ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ

ಉಡುಪಿ: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ತು ಮತ್ತು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ 51ನೇ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ (ಜ್ಞಾನ ಹಬ್ಬ)ವನ್ನು ಇದೇ ಅಕ್ಟೋಬರ್ 24ರಿಂದ 26ರ ವರೆಗೆ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.
ಉಡುಪಿ ಕೃಷ್ಣಮಠದ ಗೀತಾಮಂದಿರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ವಿದೇಶಗಳ ಸುಮಾರು 2000ಕ್ಕೂ ಅಧಿಕ ವಿದ್ವಾಂಸರು ಸಮ್ಮೇಳನದಲ್ಲಿ ವಿದ್ವತ್ತೂರ್ಣ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತಿರ್ಥ ಶ್ರೀಪಾದರು, ವ್ಯಾಸರಾಜ ಮಠದ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು, ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನತಿರ್ಥ ಶ್ರೀಪಾದರು, ಹರಿದ್ವಾರದ ಪತಂಜಲಿ ಯೋಗಪೀಠ ಟ್ರಸ್ಟ್​ನ ಸ್ವಾಮಿ ಬಾಬಾ ರಾಮದೇವ್​ ಜೀ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಆಲ್​ ಇಂಡಿಯಾ ಓರಿಯಂಟಲ್​ ಕಾನ್ಫರೆನ್ಸ್​ ಕಾರ್ಯದರ್ಶಿ ಡಾ. ಶಿವಾನಿ ವಿ. ಮಾತನಾಡಿ, ಅಷ್ಟಮಠಗಳ ಆವರಣ, ಸಂಸತ ಕಾಲೇಜು ಮುಂತಾದ ಸ್ಥಳಗಳಲ್ಲಿ ಏಕಕಾಲದಲ್ಲಿ ಶಿಕ್ಷಣ, ಬಾಲಸಾಹಿತ್ಯ, ಕನ್ನಡ, ಸಂಸತ, ಪಾಲಿ, ಉರ್ದು, ಯೋಗ, ಆಯುರ್ವೇದ ಮುಂತಾಗಿ ಒಟ್ಟು 23 ವಿಷಯಗಳಲ್ಲಿ ಪ್ರತ್ಯೇಕ ವಿಚಾರಸಂಕಿರಣಗಳು ನಡೆಯಲಿವೆ. ಬಾಬಾ ರಾಮದೇವ ಜಿ ಹಾಗೂ ಆಚಾರ್ಯ ಬಾಲಕೃಷ್ಣ ಜಿ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ಮುಂಜಾನೆ 6ರಿಂದ 7ರ ವರೆಗೆ ಯೋಗ-ಧ್ಯಾನಾದಿ ತರಗತಿಗಳು ನಡೆಯುತ್ತವೆ. ಕರ್ನಾಟಕದ ಪ್ರಸಿದ್ಧ ಅಭಿನವ ನೃತ್ಯ ಅಕಾಡೆಮಿಯಿಂದ ’ತದ್ಭಾರತಂ’ ನೃತ್ಯ ಹಾಗೂ ಉಡುಪಿ ಕಲಾವಿದರಿಂದ ‘ಯಕ್ಷನೃತ್ಯ’ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಠದ ದಿವಾನರಾದ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಎಐಒಸಿ ಕಾರ್ಯದರ್ಶಿ ಡಾ. ಶ್ರುತಿ ರಾವ್​, ವಿದ್ವಾಂಸರಾದ ಭಾಸ್ಕರ ಜೋಶಿ, ವೇದೇಶ ಆಚಾರ್ಯ, ಷಣ್ಮುಖ ಹೆಬ್ಬಾರ್​ ಉಪಸ್ಥಿತರಿದ್ದರು.